ನಮ್ಮ ಹಿಂದುತ್ವ ಒಲೆಗಳನ್ನು ಹೊತ್ತಿಸಿದರೆ ಬಿಜೆಪಿಯ ಹಿಂದುತ್ವ ಮನೆಗಳನ್ನು ಹೊತ್ತಿಸುತ್ತದೆ: ಉದ್ಧವ್ ಠಾಕ್ರೆ

ಉದ್ಧವ್ ಠಾಕ್ರೆ | PC : PTI
ಮುಂಬೈ: “ಬಿಜೆಪಿ ಮತ್ತು ನಮ್ಮ ಹಿಂದುತ್ವದ ನಡುವೆ ಬಹಳಷ್ಟು ವ್ಯತ್ಯಾಸವಿದೆ ತಮ್ಮ ಹಿಂದುತ್ವ ಜನರ ಮನೆಗಳಲ್ಲಿ ಒಲೆಗಳನ್ನು ಹೊತ್ತಿಸಿದರೆ ಬಿಜೆಪಿಯ ಹಿಂದುತ್ವ ಮನೆಗಳನ್ನು ಹೊತ್ತಿಸುತ್ತದೆ,” ಎಂದು ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಸಾರ್ವಜನಿಕ ಸಭೆಯನ್ನುದ್ಧೇಶಿಸಿ ಮಾತನಾಡಿದ ಅವರು, ಪ್ರಧಾನಿಯು ನ್ಯಾಯಾಂಗದ ಮೇಲೆ ಕೂಡ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದರಲ್ಲದೆ ಕಾನೂನು ಎಲ್ಲರಿಗೂ ಸಮಾನವಾಗಿರುವಂತೆ ಖಾತ್ರಿ ಪಡಿಸಲು ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದರು.
“ಮೋದಿ ಸರ್ಕಾರವು ನಮ್ಮ ಪಕ್ಷದ ವಿರುದ್ಧ ಚುನಾವಣಾ ಆಯೋಗವನ್ನೂ ಬಳಸಿದೆ. ನಮ್ಮ ಬಿಲ್ಲು ಬಾಣವನ್ನು ಸೆಳೆಯಲಾಯಿತು, ನೀವು (ಪ್ರಧಾನಿ) ನಮ್ಮ ಪಕ್ಷ, ಚಿಹ್ನೆ ಮತ್ತು ನನ್ನ ಜನರನ್ನೂ ಸೆಳೆದಿರಿ, ಆದರೂ ನೀವು ಉದ್ಧವ್ ಠಾಕ್ರೆಗೆ ಭಯ ಪಡುತ್ತೀರಲ್ಲವೇ?” ಎಂದು ಅವರು ಪ್ರಶ್ನಿಸಿದರು.
ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಂದ ಎಲ್ಲಾ ಅಧಿಕಾರಗಳನ್ನು ಬಿಜೆಪಿ ಸರ್ಕಾರ ಸೆಳೆದಿದೆ ಎಂದು ಅವರು ಹೇಳಿದರು.
ಕೇಜ್ರಿವಾಲ್ ಅವರಿಗೆ ಜಾಮೀನು ದೊರಕಿದೆ, ಎಲ್ಲರಿಗೂ ಗೊತ್ತು. ಮೋದಿ ಸರ್ಕಾರ ಅವರ ಎಲ್ಲಾ ಹಕ್ಕುಗಳನ್ನು ಸೆಳೆದಿದೆ. ಮೋದೀಜಿಯ ನಾಟಕ ಜೂನ್ 4ರ ತನಕ ನಡೆಯಲಿದೆ, ಜೂನ್ 4ರ ನಂತರ ಅವರು ಪ್ರಧಾನಿ ನರೇಂದ್ರ ಮೋದಿ ಎಂದು ಕರೆಸಿಕೊಳ್ಳುವುದಿಲ್ಲ, ಕೇವಲ ನರೇಂದ್ರ ಮೋದಿ ಆಗುತ್ತಾರೆ,” ಎಂದು ಉದ್ಧವ್ ಹೇಳಿದರು.







