ಪಾರ್ಕಿಂಗ್ ವಿಚಾರಕ್ಕೆ ಜಗಳ: ಯುವ ವಿಜ್ಞಾನಿ ಮೃತ್ಯು

ಡಾ. ಅಭಿಷೇಕ್ ಸ್ವರ್ಣಕರ್ (Photo credit: yespunjab.com)
ಮೊಹಾಲಿ: ಪಂಜಾಬ್ನ ಮೊಹಾಲಿ ಸೆಕ್ಟರ್ 66ರಲ್ಲಿ ಪಾರ್ಕಿಂಗ್ ಗೆ ಸಂಬಂಧಿಸಿದ ವಿವಾದದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಅಂಡ್ ರಿಸರ್ಚ್(IISER) ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯುವ ವಿಜ್ಞಾನಿಯನ್ನು ಥಳಿಸಿ ಕೊಲೆ ಮಾಡಲಾಗಿದೆ.
ಮೃತ ವಿಜ್ಞಾನಿಯನ್ನು ಡಾ. ಅಭಿಷೇಕ್ ಸ್ವರ್ಣಕರ್(39) ಎಂದು ಗುರುತಿಸಲಾಗಿದೆ. ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿ ಡಾ. ಅಭಿಷೇಕ್ ಸ್ವರ್ಣಕರ್ ಅವರಿಗೆ ನೆರೆಮನೆಯ ಮಾಂಟಿ ಎಂಬಾತನ ಜೊತೆ ವಾಗ್ವಾದ ನಡೆದಿದೆ. ಈ ವೇಳೆ ಮಾಂಟಿ ಅಭಿಶೇಕ್ ಅವರನ್ನು ನೆಲಕ್ಕೆ ತಳ್ಳಿ ಹಾಕಿ ಥಳಿಸಿದ್ದಾನೆ. ಈ ವೇಳೆ ಗಂಭೀರವಾಗಿ ಗಾಯಗೊಂಡು ಅಭೀಷೇಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಜಾರ್ಖಂಡ್ನ ಧನ್ಬಾದ್ ನಿವಾಸಿಯಾದ ಡಾ. ಸ್ವರ್ಣಕರ್ ಹೆಸರಾಂತ ಯುವ ವಿಜ್ಞಾನಿ. ಅವರ ಸಾಧನೆ ಅಂತಾರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಪ್ರಕಟವಾಗಿದೆ. ಅವರು ಸ್ವಿಟ್ಜರ್ಲೆಂಡ್ನಲ್ಲಿ ಕೆಲಸ ಮಾಡಿದ್ದರು ಮತ್ತು ಅನಾರೋಗ್ಯದ ಹಿನ್ನೆಲೆ ಇತ್ತೀಚೆಗೆ ಭಾರತಕ್ಕೆ ಮರಳಿ IISERನಲ್ಲಿ ಪ್ರಾಜೆಕ್ಟ್ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದರು. ಹಲ್ಲೆಯ ನಂತರ, ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ವೈದ್ಯರು ಅವರನ್ನು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಆರೋಪಿಯ ವಿರುದ್ಧ ಕಠಿಣ ಕ್ರಮಕ್ಕೆ ಡಾ. ಅಭಿಷೇಕ್ ಸ್ವರ್ಣಕರ್ ಅವರ ಕುಟುಂಬವು ಆಗ್ರಹಿಸಿದೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.
ಡಾ. ಅಭಿಷೇಕ್ ಸ್ವರ್ಣಕರ್ ಕೊಲೆಯ ಬಗ್ಗೆ IISER ಪ್ರತಿಕ್ರಿಯಿಸಿ, ನಾವು ಅದ್ಭುತ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ಇಂತಹ ಹಿಂಸಾಚಾರ ಸ್ವೀಕಾರಾರ್ಹವಲ್ಲ ಮತ್ತು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.