ಉಪನ್ಯಾಸ ನೀಡುವಾಗಲೇ ಕುಸಿದು ಬಿದ್ದು ಐಐಟಿ ಕಾನ್ಪುರದ ಪ್ರಾಧ್ಯಾಪಕ ಸಾವು

Photo: India Today
ಕಾನ್ಪುರ: ಐಐಟಿ ಕಾನ್ಪುರದ ಪ್ರಾಧ್ಯಾಪಕರೊಬ್ಬರು ವಿದ್ಯಾರ್ಥಿಗಳ ಸಭೆಯಲ್ಲಿ ಉಪನ್ಯಾಸ ನೀಡುತ್ತಿರುವ ಸಂದರ್ಭವೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಶುಕ್ರವಾರ ನಡೆದ ಹಳೆ ವಿದ್ಯಾರ್ಥಿಗಳ ಸಭೆಯಲ್ಲಿ ಪ್ರಾಧ್ಯಾಪಕ ಸಮೀರ್ ಖಾಂಡೇಕರ್ ವೇದಿಕೆಯಲ್ಲಿ ಉಪನ್ಯಾಸ ನೀಡುತ್ತಿರುವ ಸಂದರ್ಭ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವರು ಆಸ್ಪತ್ರೆಗೆ ತಲುಪುವ ಮೊದಲೇ ಮೃತಪಟ್ಟಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
ಸಭೆಯಲ್ಲಿ ಮಾತನಾಡಿದ್ದ ಅವರು, ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದಿದ್ದರು. ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಅವರು ವೇದಿಕೆಯಲ್ಲಿ ಕುಸಿದು ಬಿದ್ದರು ಎಂದು ಮೂಲಗಳು ತಿಳಿಸಿವೆ.
ಖಾಂಡೇಕರ್ ಅವರಿಗೆ ಅಧಿಕ ಕೊಲೆಸ್ಟ್ರಾಲ್ ಇರುವುದು 5 ವರ್ಷಗಳ ಹಿಂದೆ ಪತ್ತೆಯಾಗಿತ್ತು ಎಂದು ಐಐಟಿ ಕಾನ್ಪುರದ ಪ್ರಾದ್ಯಾಪಕರೊಬ್ಬರು ತಿಳಿಸಿದ್ದಾರೆ. ಅವರು ವಿದ್ಯಾರ್ಥಿ ವ್ಯವಹಾರಗಳ ಡೀನ್ ಹಾಗೂ ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು ಎಂದು ಅವರು ಹೇಳಿದ್ದಾರೆ.
ಐಐಟಿ ಕಾನ್ಪುರದ ಮಾಜಿ ನಿರ್ದೇಶಕ ಅಭಯ್ ಕರಂದೀಕರ್ ಅವರು ಖಾಂಡೆಕರ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಖಾಂಡೇಕರ್ ಅವರು ಅತ್ಯುತ್ತಮ ಪ್ರಾಧ್ಯಾಪಕ ಹಾಗೂ ಸಂಶೋಧಕ ಎಂದು ಅವರು ಹೇಳಿದ್ದಾರೆ.







