ಐಐಟಿ ಖರಗ್ಪುರದ ವಿದ್ಯಾರ್ಥಿ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ
ಖರಗ್ಪುರ: ಐಐಟಿ ಖರಗ್ಪುರದ ಇನ್ನೋರ್ವ ವಿದ್ಯಾರ್ಥಿ ತನ್ನ ಹಾಸ್ಟೆಲ್ನ ಕೊಠಡಿಯಲ್ಲಿ ರವಿವಾರ ಮುಂಜಾನೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಬಿಹಾರದ ಶಿವಹರ್ನ ನಿವಾಸಿ ಮುಹಮ್ಮದ್ ಆಸಿಫ್ ಖಮರ್ ಎಂದು ಗುರುತಿಸಲಾಗಿದೆ. ಈತ ಕಾಲೇಜಿನ ಮದನ ಮೋಹನ ಮಾಳವೀಯ ಹಾಲ್ನಲ್ಲಿರುವ ಎಸ್ಡಿಎಸ್ ಬ್ಲಾಕ್ನ ಕೊಠಡಿ ಸಂಖ್ಯೆ 134ರಲ್ಲಿ ವಾಸಿಸುತ್ತಿದ್ದ.
ಆಸಿಫ್ ವಾಸಿಸುತ್ತಿದ್ದ ಕೊಠಡಿಯ ಬಾಗಿಲು ಶನಿವಾರ ಬೆಳಗ್ಗೆಯಿಂದ ಲಾಕ್ ಆಗಿತ್ತು. ಆತನ ಕೆಲವು ಸಹಪಾಠಿಗಳು ಕೊಠಡಿಯ ಬಾಗಿಲು ತೆರೆಯಲು ಪ್ರಯತ್ನಿಸಿದರು. ಆದರೆ, ಅದು ಸಾಧ್ಯವಾಗದೇ ಇದ್ದಾಗ, ಅವರು ಪೊಲೀಸರಿಗೆ ಮಾಹಿತಿ ನೀಡಿದರು.
ಪೊಲೀಸ್ ಸಿಬ್ಬಂದಿ ಮುಂಜಾನೆ ಸುಮಾರು 3.30ಕ್ಕೆ ಬಾಗಿಲು ತೆರೆದರು. ಈ ಸಂದರ್ಭ ಆಸಿಫ್ನ ಮೃತದೇಹ ಸೀಲಿಂಗ್ ಫ್ಯಾನ್ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಯಿತು ಎಂದು ಅವರು ತಿಳಿಸಿದ್ದಾರೆ.
ಪೊಲೀಸರು ಅಸ್ವಾಭಾವಿಕ ಪ್ರಕರಣ ದಾಖಲಿಸಿದ್ದಾರೆ ಹಾಗೂ ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಪ್ರಕರಣದಂತೆ ಕಾಣುತ್ತದೆ. ಆದರೆ, ಸಾವಿನ ಖಚಿತ ಕಾರಣ ತಿಳಿಯಲು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಐಐಟಿ ಖರಗ್ಪುರ ವಿದ್ಯಾರ್ಥಿಗಳ ಆತ್ಮಹತ್ಯೆಯ ಕಾರಣಕ್ಕೆ ಈ ವರ್ಷ ಸುದ್ದಿಯಾಗಿದೆ. ಎಪ್ರಿಲ್ 20ರಂದು ಸಾಗರ ಎಂಜಿನಿಯರಿಂಗ್ ಹಾಗೂ ನೌಕಾ ವಾಸ್ತುಶಿಲ್ಪ ವಿಭಾಗದ ನಾಲ್ಕನೇ ವರ್ಷದ ವಿದ್ಯಾರ್ಥಿ ಅಂಕಿತ್ ವಾಲ್ಕರ್ನ ಮೃತದೇಹ ಹಾಸ್ಟೆಲ್ನ ಕೊಠಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಜನವರಿ 12ರಂದು ತೃತೀಯ ವರ್ಷದ ಪದವಿ ವಿದ್ಯಾರ್ಥಿ ಶಾನ್ ಮಲಿಕ್ನ ಮೃತದೇಹ ಹಾಸ್ಟೆಲ್ನ ಕೊಠಡಿಯಲ್ಲಿ ಪತ್ತೆಯಾಗಿತ್ತು. 2024 ಜೂನ್ಲ್ಲಿ ಜೈವಿಕ ತಂತ್ರಜ್ಞಾನ ಹಾಗೂ ಜೀವರಸಾಯನಿಕ ಇಂಜಿನಿಯರಿಂಗ್ನ ನಾಲ್ಕನೇ ವರ್ಷದ ವಿದ್ಯಾರ್ಥಿನಿ ದೇವಿಕಾ ಪಿಳ್ಳೈಯ ಆತ್ಮಹತ್ಯೆ ಮಾಡಿಕೊಂಡಿದ್ದಳು.







