ಐಐಟಿ ರೂರ್ಕಿಯಿಂದ ಮೋಡಿ ಲಿಪಿಯಿಂದ ದೇವನಾಗರಿಗೆ ಲಿಪ್ಯಂತರ ಮಾಡುವ ತಂತ್ರಾಂಶ ಅಭಿವೃದ್ಧಿ

PC : @iitroorkee
ಹೊಸದಿಲ್ಲಿ, ಜು. 18: ಐತಿಹಾಸಿಕ ‘ಮೋಡಿ’ ಲಿಪಿಯಿಂದ ದೇವನಾಗರಿ ಲಿಪಿಗೆ ಅಕ್ಷರಗಳನ್ನು ಹೊಂದಿಸುವುದಕ್ಕಾಗಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ರೂರ್ಕಿಯು ಜಗತ್ತಿನ ಮೊದಲ ಕೃತಕ ಬುದ್ಧಿಮತ್ತೆ ತಂತ್ರಾಂಶ (ಎಐ ಫ್ರೇಮ್ವರ್ಕ್)ವನ್ನು ಅಭಿವೃದ್ಧಿಪಡಿಸಿದೆ.
ವಿಶನ್ ಲಾಂಗ್ಜೇಜ್ ಮೋಡೆಲ್ (ವಿಎಲ್ಎಮ್) ರಚನೆಯನ್ನು ಆಧರಿಸಿದ ‘‘ಎಮ್ಒಎಸ್ಸಿನೆಟ್’’ ಮಾದರಿಯು ಮಧ್ಯಕಾಲೀನ ಹಸ್ತಪ್ರತಿಗಳನ್ನು ಸಂರಕ್ಷಿಸಿಡಲು ಪ್ರಭಾವಶಾಲಿ ಸಲಕರಣೆಯೊಂದನ್ನು ಒದಗಿಸುತ್ತದೆ. ಜೊತೆಗೆ, ಅದು ಡಿಜಿಟಲ್ ಇಂಡಿಯಾ ಮತ್ತು ಭಾಷಿಣಿ ಮುಂತಾದ ಯೋಜನೆಗಳ ಅಡಿಯಲ್ಲಿ ಬೃಹತ್ ಪ್ರಮಾಣದ ಡಿಜಿಟಲೀಕರಣಕ್ಕೆ ಬೆಂಬಲ ನೀಡುತ್ತದೆ.
‘‘ಐತಿಹಾಸಿಕ ಲಿಪಿಗಳಿಂದ ಆಧುನಿಕ ನೋಟದವರೆಗೆ’’ ಎಂಬ ಹೆಸರಿನ ಯೋಜನೆಯು, ‘‘ಮೋಡಿ ಟ್ರಾನ್ಸ್’’ನ್ನು ಪರಿಚಯಿಸಿದೆ. ಇದು ಈ ಮಾದರಿಯ ಮೊದಲ ದತ್ತಾಂಶ ಕೋಶವಾಗಿದೆ. ಅದರಲ್ಲಿ ಶಿವಕಾಲೀನ್, ಪೇಶ್ವಕಾಲೀನ್ ಮತ್ತು ಆಂಗ್ಲಕಾಲೀನ್ ಎಂಬ ಮೂರು ಐತಿಹಾಸಿಕ ಕಾಲಗಳ ಮೋಡಿ ಲಿಪಿ ಹಸ್ತಪ್ರತಿಗಳ 2,000ಕ್ಕೂ ಅಧಿಕ ಚಿತ್ರಗಳಿವೆ. ಜೊತೆಗೆ, ಪರಿಣತರ ಪರಿಶೀಲನೆಗೆ ಒಳಪಟ್ಟಿರುವ ದೇವನಾಗರಿ ಲಿಪ್ಯಂತರಗಳಿವೆ.





