ಅಕ್ರಮ ಶಸ್ತ್ರಾಸ್ತ್ರ ಪೂರೈಕೆದಾರ ಸಲೀಮ್ ಪಿಸ್ತೂಲ್ ನೇಪಾಳದಲ್ಲಿ ಬಂಧನ

ಶೇಖ್ ಸಲೀಮ್ | PC : X
ಹೊಸದಿಲ್ಲಿ, ಆ. 9: ಭಾರತದ ಅತಿ ದೊಡ್ಡ ಅಕ್ರಮ ಶಸ್ತ್ರಾಸ್ತ್ರ ಪೂರೈಕೆದಾರ ಶೇಖ್ ಸಲೀಮ್ ಯಾನೆ ‘ಸಲೀಮ್ ಪಿಸ್ತೂಲ್’ನನ್ನು ನೇಪಾಳದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ದಿಲ್ಲಿ ಪೊಲೀಸ್ ನ ವಿಶೇಷ ಘಟಕ ಮತ್ತು ಭಾರತೀಯ ಭದ್ರತಾ ಸಂಸ್ಥೆಗಳು ನೇಪಾಳ ಪೊಲೀಸರೊಂದಿಗೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಸಲೀಮ್ ಪಿಸ್ತೂಲ್ ನನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದರು.
ಹಲವು ವರ್ಷಗಳಿಂದ ಸಲೀಮ್ ಪಾಕಿಸ್ತಾನದಿಂದ ಭಾರತಕ್ಕೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದನು ಎನ್ನಲಾಗಿದೆ. ಅವನು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐ ಮತ್ತು ಭೂಗತ ಪಾತಕಿ ದಾವೂದ್ ಇಬ್ರಾಹೀಮ್ ನೊಂದಿಗೆ ಹೊಂದಿರುವ ನಂಟನ್ನು ಸೂಚಿಸುವ ಪುರಾವೆಯನ್ನು ತನಿಖಾ ಸಂಸ್ಥೆಗಳು ಪತ್ತೆಹಚ್ಚಿವೆ.
ಲಾರೆನ್ಸ್ ಬಿಷ್ಣೋಯಿ ಮತ್ತು ಹಾಶಿಮ್ ಬಾಬಾ ಸೇರಿದಂತೆ ಪ್ರಮುಖ ಗ್ಯಾಂಗ್ ಸ್ಟರ್ ಗಳಿಗೆ ಸಲೀಮ್ ಪಿಸ್ತೂಲ್ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತಿದ್ದ ಎನ್ನಲಾಗಿದೆ. ಸಿದು ಮೂಸೆವಾಲಾ ಕೊಲೆ ಪ್ರಕರಣದಲ್ಲೂ ಅವರ ಹೆಸರು ಕೇಳಿಬಂದಿತ್ತು.
ಪಿಸ್ತೂಲ್ ಸಲೀಮ್ ನನ್ನು 2018ರಲ್ಲಿ ದಿಲ್ಲಿ ಪೊಲೀಸರು ಬಂಧಿಸಿದ್ದರು. ಆದರೆ, ಅವನು ಬಳಿಕ ವಿದೇಶಕ್ಕೆ ತಪ್ಪಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದ. ಇತ್ತೀಚೆಗೆ, ಅವನು ನೇಪಾಳದಲ್ಲಿ ಅಡಗಿ ಕುಳಿತಿದ್ದಾನೆ ಎನ್ನುವ ಮಾಹಿತಿಯನ್ನು ಗುಪ್ತಚರ ಮೂಲಗಳು ನೀಡಿದವು. ಇದರ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಭದ್ರತಾ ಸಂಸ್ಥೆಗಳು ಅವನನ್ನು ನೇಪಾಳದಲ್ಲಿ ಪತ್ತೆಹಚ್ಚಿ ಬಂಧಿಸಿವೆ.
ಬಾಬಾ ಸಿದ್ದೀಕಿ ಕೊಲೆ ಪ್ರಕರಣದಲ್ಲೂ ಅವನ ಹೆಸರು ಕೇಳಿಬಂದಿತ್ತು.







