ಅಶ್ಲೀಲ, ಕಾನೂನುಬಾಹಿರ ವಿಷಯಗಳ ಪ್ರಸಾರದ ವಿರುದ್ಧ ಕ್ರಮ ಕೈಗೊಳ್ಳಿ, ಇಲ್ಲವೇ ಪರಿಣಾಮ ಎದುರಿಸಿ: ಆನ್ಲೈನ್ ವೇದಿಕೆಗಳಿಗೆ ಕೇಂದ್ರದ ಎಚ್ಚರಿಕೆ

ಸಾಂದರ್ಭಿಕ ಚಿತ್ರ | Photo Credit : freepik
ಹೊಸದಿಲ್ಲಿ,ಡಿ.30: ಅಶ್ಲೀಲ, ಅಸಭ್ಯ, ಲೈಂಗಿಕ ದೃಶ್ಯಗಳು ಮತ್ತಿತರ ಕಾನೂನುಬಾಹಿರ ಕಂಟೆಂಟ್ಗಳ ವಿರುದ್ಧ ಕಾರ್ಯಾಚರಿಸಲು ವಿಫಲವಾದಲ್ಲಿ ಕಾನೂನು ಪರಿಣಾಮಗಳನ್ನು ಎದುರಿಸಬೇಕಾದೀತು ಎಂದು ಕೇಂದ್ರ ಸರಕಾರವು ಸಾಮಾಜಿಕ ಜಾಲತಾಣಗಳು ಸೇರಿದಂತೆ ಆನ್ಲೈನ್ ಪ್ಲಾಟ್ಫಾರ್ಮ್(ವೇದಿಕೆ)ಗಳಿಗೆ ಮಂಗಳವಾರ ಎಚ್ಚರಿಕೆಯನ್ನು ನೀಡಿದೆ.
2025ರ ಡಿಸೆಂಬರ್ 29ರಂದು ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಈ ಬಗ್ಗೆ ಸೂಚನಾ ಪತ್ರವೊಂದನ್ನು ಬಿಡುಗಡೆಗೊಳಿಸಿದ್ದು, ಅನುಸರಣಾ ಕಾರ್ಯಚೌಕಟ್ಟನ್ನು ತಕ್ಷಣವೇ ಪರಿಶೀಲಿಸುವಂತೆ ಸಾಮಾಜಿಕ ಮಾಧ್ಯಮಸಂಸ್ಥೆಗಳನ್ನು ಕೇಳಿಕೊಂಡಿದೆ. ಒಂದು ವೇಳೆ ವಿಫಲವಾದಲ್ಲಿ ಕಾನೂನು ಕ್ರಮ ಎದುರಿಸಬೇಕಾದೀತೆಂದು ಎಚ್ಚರಿಕೆ ನೀಡಿದೆ.
ಆನ್ಲೈನ್ ಸಾಮಾಜಿಕ ಮಾಧ್ಯಮಸಂಸ್ಥೆಗಳು ಸ್ಥಳೀಯ ಅಧಿಕಾರಿಗಳನ್ನು ನೇಮಿಸಿ, ದೂರು ಬಂದ 72 ಗಂಟೆಗಳಲ್ಲಿ ವಿವಾದಾತ್ಮಕ ಅಶ್ಲೀಲ ಕಂಟೆಟ್ ಅನ್ನು ತೆಗೆದುಹಾಕಬೇಕೆಂದು ಸೂಚಿಸಿದೆ.
2021ರ ಐಟಿ ನಿಯಮಗಳ ಅಡಿಯಲ್ಲಿ ಮಧ್ಯವರ್ತಿಗಳು ತಮ್ಮ ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ಅಶ್ಲೀಲ, ಅಸಭ್ಯ, ಹಾಗೂ ಮಕ್ಕಳಿಗೆ ಅಪಾಯಕಾರಿಯಾದ ಯಾವುದೇ ಮಾಹಿತಿ ಮತ್ತಿತರ ಕಾನೂನುಬಾಹಿರ ವಿಷಯಗಳನ್ನು ಪ್ರಸಾರವಾಗದಂತೆ ತಡೆಯುವುದು ಅವುಗಳ ಕಾನೂನುಬದ್ಧ ಜವಾಬ್ದಾರಿಯಾಗಿದೆ ಎಂದು ಸೂಚನಾಪತ್ರ ತಿಳಿಸಿದೆ.
‘‘ಒಂದು ವೇಳೆ ಐಟಿ ಕಾಯ್ದೆ ಅಥವಾ ಐಟಿ ನಿಯಮಗಳ ಕಾನೂನುಗಳನ್ನು ಅನುಸರಿಸದೆ ಇದ್ದಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ, ಬಿಎನ್ಎಸ್ ಮತ್ತಿತರ ಅನ್ವಯಿಕ ಕ್ರಿಮಿನಲ್ ಕಾನೂನುಗಳಡಿ, ಸಂಬಂಧಪಟ್ಟ ಆನ್ಲೈನ್ ಪ್ಲಾಟ್ಫಾರ್ಮ್ಗಳು, ಸ್ಥಳೀಯ ಅಧಿಕಾರಿಗಳು ಹಾಗೂ ಅವುಗಳ ಬಳಕೆದಾರರ ವಿರುದ್ಧ ಕ್ರಮಗಳನ್ನು ಕೈಗೊಳ್ಳಲಾಗುವುದು’’ ಎಂದು ಸೂಚನಾ ಪತ್ರವು ತಿಳಿಸಿದೆ.







