ಹೈದರಾಬಾದ್ | ಶಾಲೆಯೊಳಗೆ ಅಕ್ರಮ ಕಾರ್ಖಾನೆ ಪತ್ತೆ: ಲಕ್ಷಾಂತರ ರೂ.ಮೌಲ್ಯದ ಮಾದಕ ದ್ರವ್ಯಗಳು ವಶ

Photo | newsbytes
ಹೈದರಾಬಾದ್: ಹೈದರಾಬಾದ್ ನ ಈಗಲ್ (ಎಲೈಟ್ ಆ್ಯಕ್ಷನ್ ಗ್ರೂಪ್ ಫಾರ್ ಡ್ರಗ್ ಲಾ ಎನ್ ಫೋರ್ಸ್ ಮೆಂಟ್) ತಂಡವು ಬೊವೇನಪಲ್ಲಿಯಲ್ಲಿನ ಖಾಸಗಿ ಶಾಲೆಯಲ್ಲಿ ಕಾರ್ಯಾಚರಿಸುತ್ತಿದ್ದ ಅಲ್ಪ್ರಝೋಲಂ ತಯಾರಿಕಾ ಘಟಕವನ್ನು ಪತ್ತೆ ಹಚ್ಚಿದ್ದು, ಸ್ಥಳದಿಂದ ಮಾದಕ ದ್ರವ್ಯಗಳು, ನಗದು ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ಉಪಕರಣಗಳನ್ನು ವಶಪಡಿಸಿಕೊಂಡಿದೆ.
ಈ ಕಾರ್ಖಾನೆಯನ್ನು ಮೆಹಬೂಬನಗರ್ ನಿವಾಸಿ ಹಾಗೂ ಮೇಧಾ ಶಾಲೆಯ ಮಾಲಕ ಮಲೇಲ ಜಯಪ್ರಕಾಶ್ ಗೌಡ್ ಎಂಬ ವ್ಯಕ್ತಿ ನಡೆಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಪ್ರಝೊಲಂ ತಯಾರಿಸುವ ಸೂತ್ರ ಹಾಗೂ ಪ್ರಕ್ರಿಯೆಯನ್ನು ತಿಳಿದಿದ್ದ ಗುರುವಾರೆಡ್ಡಿ ಎಂಬ ವ್ಯಕ್ತಿಯೊಂದಿಗೆ ಸೇರಿಕೊಂಡು ಜಯಪ್ರಕಾಶ್ ಈ ಕಾರ್ಖಾನೆ ನಡೆಸುತ್ತಿದ್ದ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳಿಲ್ಲದ ತರಗತಿಯ ಕೋಣೆಯಲ್ಲಿ ಜಯಪ್ರಕಾಶ್ ಈ ಘಟಕವನ್ನು ನಡೆಸುತ್ತಿದ್ದ ಹಾಗೂ ಮಾದಕ ದ್ರವ್ಯವನ್ನು ಬೂತ್ ಪುರ್ ಹಾಗೂ ಮಹಬೂಬ್ ನಗರ ಜಿಲ್ಲೆಯ ಸಮೀಪದ ಪ್ರದೇಶಗಳಲ್ಲಿನ ಮದ್ಯದಂಗಡಿಗಳಿಗೆ ಪೂರೈಸುತ್ತಿದ್ದ ಎಂದು ಆರೋಪಿಸಲಾಗಿದೆ.
ದಾಳಿಯ ವೇಳೆ 3.5 ಕೆಜಿ ತೂಕದ ಅಲ್ಪ್ರಝೋಲಂ ಹಾಗೂ ಅರ್ಧಂಬರ್ಧ ತಯಾರಿಸಲಾಗಿದ್ದ 4.3 ಕೆಜಿ ತೂಕದ ಮಾತ್ರೆ, ತಯಾರಿಕಾ ಉಪಕರಣಗಳು ಹಾಗೂ 21 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಶಾಲೆಯಲ್ಲಿ ಅಕ್ರಮವಾಗಿ ಮಾದಕ ದ್ರವ್ಯ ತಯಾರಿಸುತ್ತಿರುವುದನ್ನು ಪತ್ತೆ ಹಚ್ಚಿರುವುದರಿಂದ, ಸುರಕ್ಷತೆ ಹಾಗೂ ಕಾನೂನು ಪಾಲನೆ ಬಗ್ಗೆ ಗಂಭೀರ ಕಳವಳ ವ್ಯಕ್ತವಾಗಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿಗಳನ್ನು ಅಪಾಯಕ್ಕೆ ಸಿಲುಕಿಸಿದಂತಾಗಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಈ ತಯಾರಿಕೆಯಲ್ಲಿ ಭಾಗಿಯಾಗಿರುವ ಹೆಚ್ಚುವರಿ ಘಟಕಗಳು ಹಾಗೂ ಮಾದಕ ದ್ರವ್ಯ ಉತ್ಪಾದನೆ ಹಾಗೂ ಸರಬರಾಜಿನ ಭಾರಿ ಜಾಲದಲ್ಲಿ ಭಾಗಿಯಾಗಿರುವವರನ್ನು ಪತ್ತೆ ಹಚ್ಚಲು ಈಗಲ್ ತಂಡ ತನಿಖೆಯನ್ನು ಮುಂದುವರಿಸಿದೆ. ಇದಕ್ಕೆ ಜವಾಬ್ದಾರರಾಗಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.







