ಕಲಾವಿದ ಮಾರಿಯೋ ಮಿರಾಂಡ ಕಲಾಕೃತಿಗಳ ಅಕ್ರಮ ಬಳಕೆ: ಜಿ20 ಆಯೋಜಕರ ವಿರುದ್ಧ ಕ್ರಮದ ಎಚ್ಚರಿಕೆ ನೀಡಿದ ಕುಟುಂಬ
ಸಾಂದರ್ಭಿಕ ಚಿತ್ರ Photo: PTI
ಗೋವಾ: ಖ್ಯಾತ ಕಲಾವಿದ ಮಾರಿಯೋ ಡಿ ಮಿರಾಂಡ ಅವರ ಕಲಾಕೃತಿಗಳನ್ನು ತಮ್ಮ ಅನುಮತಿಯಿಲ್ಲದೆ ಜಿ20 ಸಭೆಗಳಲ್ಲಿ ಬಳಸಿದ ಗೋವಾ ಸರ್ಕಾರ ಮತ್ತು ಕಾರ್ಯಕ್ರಮದ ಸಂಘಟಕರ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದಾಗಿ ಮಿರಾಂಡ ಅವರ ಕುಟುಂಬ ಎಚ್ಚರಿಕೆ ನೀಡಿದೆ.
ಕೃತಿಸ್ವಾಮ್ಯದ ಕಲಾಕೃತಿಗಳ “ಅಕ್ರಮ” ಬಳಕೆ ತಮಗೆ ಅಚ್ಚರಿ ತಂದಿದೆ ಎಂದ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಕಲಾವಿದನ ಪುತ್ರರಾದ ರಿಶಾದ್ ಮಿರಾಂಡ ಮತ್ತು ರಾವುಲ್ ಮಿರಾಂಡ ಹೇಳಿದ್ದಾರೆ.
“ತಾನು ಅಭಿವೃದ್ಧಿ ಹೊಂದಿದ ರಾಷ್ಟ್ರ ಎಂದು ಜಿ20 ರಾಷ್ಟ್ರಗಳಿಗೆ ತೋರ್ಪಡಿಸಲು ಭಾರತ ಯತ್ನಿಸುವ ಭರದಲ್ಲಿ ನಮ್ಮ ದಿವಂಗತ ತಂದೆಯ ಕಲಾಕೃತಿಗಳ ಹಕ್ಕುಸ್ವಾಮ್ಯವನ್ನು ಅತಿಕ್ರಮಿಸಲಾಗಿದೆ,” ಎಂದು ಅವರು ಖೇದ ವ್ಯಕ್ತಪಡಿಸಿದ್ದಾರೆ.
ಈ ಹಿಂದಿನ ಕೊನೆಯ ಜಿ20 ಪ್ರವಾಸೋದ್ಯಮ ಗುಂಪಿನ ಸಭೆ ಗೋವಾದಲ್ಲಿ ಜೂನ್ 19 ರಿಂದ 22ರ ತನಕ ನಡೆದಿತ್ತು.
ಕಲಾವಿದನ ಕುಟುಂಬ 2011 ರಲ್ಲಿ ಅವರ ಸಾವಿನ ಮೊದಲು ಸ್ಥಾಪಿಸಿದ ಮಾರಿಯೋ ಗ್ಯಾಲರಿಯ ಕ್ಯುರೇಟರ್ ಜೆರಾರ್ಡ್ ಡಾ ಕುನ್ಹಾ ಪ್ರತಿಕ್ರಿಯಿಸಿ ಮುಖ್ಯ ಕಾರ್ಯದರ್ಶಿ ಪುನೀತ್ ಕುಮಾರ್ ಗೋಯಲ್ ಹಾಗೂ ಗೋವಾದಲ್ಲಿ ಜಿ20 ಸಭೆಗಳ ಅಧಿಕೃತ ಉಸ್ತುವಾರಿ ಸಂಜಿತ್ ರೋಡ್ರಿಗಸ್ ಅವರಿಗೆ ಕಾನೂನು ನೋಟಿಸ್ ಕಳುಹಿಸಲಾಗುವುದು ಎಂದಿದ್ದಾರೆ.
“ವಿಐಪಿಗಳಿಗೆ ಉಡುಗೊರೆಯಾಗಿ ನೀಡುವ ಒಂದು ಮಾದರಿಯಲ್ಲಿ ಮಿರಾಂಡ ಅವರ ಕಲಾಕೃತಿಯನ್ನು ಬಳಸಲಾಗಿದೆ. ಇನ್ನೊಂದು ಉಲ್ಲಂಘನೆಯಲ್ಲಿ 16 ದೊಡ್ಡ ಗಾತ್ರದ ಫೈಬರ್ಗ್ಲಾಸ್ ವಿಗ್ರಹಗಳನ್ನು ಮಿರಾಂಡ ಅವರ ಕಲಾಕೃತಿಯ ಹಕ್ಕುಸ್ವಾಮ್ಯ ಉಲ್ಲಂಘಿಸಿ ರಚಿಸಲಾಗಿದೆ,” ಎಂದು ಅವರು ಆರೋಪಿಸಿದ್ದಾರೆ.
ಮಿರಾಂಡ ಅವರ ಕಲಾಕೃತಿಗಳನ್ನು ಬಳಸುವ ಮೊದಲು ಅನುಮತಿಯನ್ನು ಪಡೆಯುವಂತೆಯೂ ಅವರು ಕೋರಿದ್ದಾರೆ. ನೋಟಿಸ್ ಜಾರಿಗೊಳಿಸಿದರೆ ಅದಕ್ಕೆ ಉತ್ತರಿಸಲಾಗುವುದು ಎಂದು ರಾಡ್ರಿಗಸ್ ಹೇಳಿದ್ದಾರೆ.
ದಕ್ಷಿಣ ಗೋವಾದ ಲೌಟೊಲಿಂ ಗ್ರಾಮದವರಾಗಿದ್ದ ಮಿರಾಂಡ ಡಿಸೆಂಬರ್ 11, 2011ರಂದು ನಿಧನರಾಗಿದ್ದರು. 2012 ರಲ್ಲಿ ಅವರಿಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮ ವಿಭೂಷಣ್ ಅನ್ನು ಮರಣೋತ್ತರವಾಗಿ ಪ್ರದಾನ ಮಾಡಲಾಗಿತ್ತು.