‘ನ್ಯಾಯಾಧೀಶನಾಗಲಿದ್ದೇನೆ, ನನ್ನ ಬದುಕನ್ನು ಹಾಳು ಮಾಡಬೇಡಿ’
ಅತ್ಯಾಚಾರ ಪ್ರಕರಣ ಕೈಬಿಡುವಂತೆ ಕಣ್ಣೀರಿಟ್ಟ ಸರಕಾರಿ ವಕೀಲ
ಸಾಂದರ್ಭಿಕ ಚಿತ್ರ | Photo: PTI
ತಿರುವನಂತಪುರ: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಕೇರಳದ ಸರಕಾರಿ ವಕೀಲರೋರ್ವರು ಸಂತ್ರಸ್ತೆಯ ಕುಟುಂಬಕ್ಕೆ ದೂರವಾಣಿ ಕರೆ ಮಾಡಿ ತನ್ನ ವಿರುದ್ಧದ ಪ್ರಕರಣವನ್ನು ಹಿಂದೆಗೆದುಕೊಳ್ಳುವಂತೆ ಕಣ್ಣೀರಿಟ್ಟು ಅಂಗಲಾಚಿದ್ದು ಬಹಿರಂಗಗೊಂಡಿದೆ. ‘ನನ್ನ ಜೀವನವನ್ನು ಹಾಳು ಮಾಡಬೇಡಿ, ನಾನು ನ್ಯಾಯಾಧೀಶನಾಗಿ ನೇಮಕಗೊಳ್ಳಲಿದ್ದೇನೆ ’ಎಂದೂ ಅವರು ಅಲವತ್ತುಕೊಂಡಿದ್ದರು.
ಎರ್ನಾಕುಲಂ ಗ್ರಾಮೀಣ ಪೋಲಿಸರು ಕೇರಳ ಉಚ್ಚ ನ್ಯಾಯಾಲಯದ ಹಿರಿಯ ಸರಕಾರಿ ವಕೀಲ ಪಿ.ಜಿ.ಮನು ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಮನು ಮಹಿಳಾ ಕಕ್ಷಿದಾರಳ ಮೇಲೆ ತನ್ನ ಕಚೇರಿಯಲ್ಲಿ ಮತ್ತು ಆಕೆಯ ಮನೆಯಲ್ಲಿ ಲೈಂಗಿಕ ದೌರ್ಜನ್ಯವೆಸಗಿದ್ದರು ಎಂದು ಆರೋಪಿಸಲಾಗಿದೆ.
ಪ್ರತ್ಯೇಕ ಪ್ರಕರಣವೊಂದರಲ್ಲಿ ಕಾನೂನು ಸಲಹೆ ಪಡೆಯಲು ಸಂತ್ರಸ್ತೆ ಆರೋಪಿಯನ್ನು ಸಂಪರ್ಕಿಸಿದ್ದಳು. ಕಳೆದ ಅಕ್ಟೋಬರ್ ನಲ್ಲಿ ಮಹಿಳೆ ಮನು ಕಚೇರಿಗೆ ತೆರಳಿದ್ದಾಗ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ ಅವರು, ಈ ಬಗ್ಗೆ ಯಾರಲ್ಲೂ ಬಾಯಿಬಿಡದಂತೆ ಬೆದರಿಕೆಯೊಡ್ಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ನಂತರ ಇತರ ಎರಡು ಸಂದರ್ಭಗಳಲ್ಲಿ ಸಂತ್ರಸ್ತೆಯ ಮೇಲೆ ಅತ್ಯಾಚಾರವೆಸಗಿದ್ದ ಮನು, ಆಕೆಯ ಒಪ್ಪಿಗೆಯಿಲ್ಲದೆ ತನ್ನ ಮೊಬೈಲ್ ನಲ್ಲಿ ಆಕೆಯ ಆಕ್ಷೇಪಾರ್ಹ ಚಿತ್ರಗಳನ್ನು ತೆಗೆದಿದ್ದಲ್ಲದೆ, ವೀಡಿಯೊಗಳನ್ನೂ ಮಾಡಿಕೊಂಡಿದ್ದರು.
ಸಂತ್ರಸ್ತೆ ಮನು ವಿರುದ್ಧ ಪ್ರಕರಣವನ್ನು ದಾಖಲಿಸಿದ ಬಳಿಕ ವಿಷಯವನ್ನು ಇತ್ಯರ್ಥಗೊಳಿಸುವ ಪ್ರಯತ್ನವಾಗಿ ಅವರು ಆಕೆಯ ಕುಟುಂಬವನ್ನು ಸಂಪರ್ಕಿಸಿದ್ದರು. ಸುದ್ದಿಸಂಸ್ಥೆಗೆ ಲಭ್ಯವಾಗಿರುವ ಆಡಿಯೊದಲ್ಲಿ ಮನು ಸಂತ್ರಸ್ತೆಯ ಸೋದರ ಸಂಬಂಧಿ ಜೊತೆ ಮಾತನಾಡಿದ್ದು,ಅಳುತ್ತಿದ್ದುದು ಮತ್ತು ಅತ್ಯಾಚಾರ ಪ್ರಕರಣವನ್ನು ಕೈಬಿಡುವಂತೆ ಅಂಗಲಾಚಿದ್ದು ಸ್ಪಷ್ಟವಾಗಿ ಕೇಳುತ್ತಿದೆ.
ಕೇರಳದ ಅಡ್ವೋಕೇಟ್ ಜನರಲ್ ಕಚೇರಿಯ ಪ್ರಕಾರ ಪ್ರಕರಣ ಬೆಳಕಿಗೆ ಬಂದ ಬಳಿಕ ಮನು ತನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಆರೋಪಿಯನ್ನು ಇನ್ನೂ ಬಂಧಿಸಿಲ್ಲ ಎಂದು ತಿಳಿಸಿದ ಸಂತ್ರಸ್ತೆ ಪರ ನ್ಯಾಯವಾದಿ ಪದ್ಮಲಕ್ಷ್ಮಿ ಅವರು, ಆರೋಪಿ ದೂರುದಾರಳ ಕುಟುಂಬಕ್ಕೆ ದೂರವಾಣಿ ಕರೆ ಮಾಡಿ ಪ್ರಕರಣವನ್ನು ಕೈಬಿಡುವಂತೆ ಬೇಡಿಕೊಂಡಿದ್ದರು. ತಾನು ನ್ಯಾಯಾಧೀಶನಾಗಿ ಆಯ್ಕೆಯಾಗಲಿದ್ದೇನೆ ಎಂದು ಅವರು ಹೇಳಿಕೊಂಡಿದ್ದರು. ಅವರು ಕ್ರಿಮಿನಲ್ ವಕೀಲರಾಗಿದ್ದಾರೆ. ಬಂಧಿಸುವಲ್ಲಿ ವಿಳಂಬವು ಸಾಕ್ಷ್ಯಗಳನ್ನು ನಾಶಗೊಳಿಸಲು ಅವರಿಗೆ ಸಮಯಾವಕಾಶ ನೀಡುತ್ತದೆ ಎಂದರು.