ಭಾರತ- ಯುರೋಪ್ ಮುಕ್ತ ವ್ಯಾಪಾರ ಒಪ್ಪಂದ | ಅಟೊಮೊಬೈಲ್ ಆಮದು ಸುಂಕ ಇಳಿಸಿದ ಭಾರತ

ಸಾಂದರ್ಭಿಕ ಚಿತ್ರ (AI)
ವಿದೇಶಿ ಆಮದು ಕಾರುಗಳ ಮೇಲೆ ಶೇ 70ರಿಂದ ಶೇ 110ರಷ್ಟು ತೆರಿಗೆಗಳು ಇವೆ. ಇದೀಗ ಭಾರತ ಮತ್ತು ಯುರೋಪ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದದಿಂದಾಗಿ ಕಾರುಗಳ ಮೇಲಿನ ಆಮದು ಸುಂಕ ಕ್ರಮೇಣ ಶೇ 10ಕ್ಕೆ ಇಳಿಸಲಾಗುತ್ತಿದೆ!
ಭಾರತ ಮತ್ತು ಯುರೋಪ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿವೆ. ಜಾಗತಿಕ ವ್ಯವಹಾರಗಳು ಮತ್ತು ಭಾರತದಲ್ಲಿ ಹೂಡಿಕೆದಾರರ ವಿಶ್ವಾಸವನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಭಾರತ ಇದನ್ನು ʼಎಲ್ಲಾ ಒಪ್ಪಂದಗಳ ತಾಯಿʼ ಎಂದು ಕರೆದಿದೆ. ಯುನೈಟೆಡ್ ಕಿಂಗ್ಡಂ ಮತ್ತು ಆಸ್ಟ್ರೇಲಿಯ ಜೊತೆಗಿನ ವ್ಯಾಪಾರ ಒಪ್ಪಂದದ ರೀತಿಯಲ್ಲಿಯೇ ಯುರೋಪ್ ಜೊತೆಗೆ ಒಪ್ಪಂದವಾಗಿದೆ.
ಜವಳಿ, ರತ್ನಗಳು ಮತ್ತು ಆಭರಣಗಳು, ಚರ್ಮ ಮತ್ತು ಸೆಣಬುಗಳ ಕ್ಷೇತ್ರವು ಈ ವ್ಯಾಪಾರ ಒಪ್ಪಂದದಿಂದ ಪ್ರಯೋಜನ ಪಡೆಯಲಿವೆ. ಈ ಒಪ್ಪಂದವು ಜಾಗತಿಕ ಜಿಡಿಪಿಯ ಶೇ 25ರಷ್ಟು ಮತ್ತು ಜಾಗತಿಕ ವ್ಯಾಪಾರದ ಮೂರನೇ ಒಂದು ಭಾಗವನ್ನು ಪ್ರತಿನಿಧಿಸುತ್ತದೆ ಎಂದು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಅಟೋಮೊಬೈಲ್ ಕ್ಷೇತ್ರದಲ್ಲಿ ಬದಲಾವಣೆ
ಯೂರೋಪ್ನ ಅಟೋಮೊಬೈಲ್ ಕ್ಷೇತ್ರ ಎಂದಾಕ್ಷಣ Volkswagen, Renault ಮತ್ತು BMW ಹೆಸರು ಕೇಳಿಬರುತ್ತದೆ. ಇದೀಗ ಭಾರತದಲ್ಲಿ ಇವು ಶೇ 3ರಷ್ಟು ಮಾರುಕಟ್ಟೆಯನ್ನು ಮಾತ್ರ ಹೊಂದಿವೆ. ಭಾರತದ ಬಹುತೇಕ ಮಾರುಕಟ್ಟೆ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಮತ್ತು ತವರಿನ ಮಹೀಂದ್ರಾ ಮತ್ತು ಟಾಟಾ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್ ಆವರಿಸಿವೆ.
ಭಾರತವು ಅಮೆರಿಕ ಮತ್ತು ಚೀನಾ ನಂತರದ ಅತಿದೊಡ್ಡ ಕಾರು ಉದ್ಯಮವನ್ನು ಹೊಂದಿದೆ. ದೇಶದ ಆಟೊಮೊಬೈಲ್ ಕ್ಷೇತ್ರ ಬಹಳ ಸಂರಕ್ಷಿತ ವಲಯವಾಗಿದೆ. ವಿದೇಶಿ ಆಮದು ಕಾರುಗಳ ಮೇಲೆ ಶೇ 70ರಿಂದ ಶೇ 110ರಷ್ಟು ತೆರಿಗೆಗಳು ಇವೆ. ಇದೀಗ ಭಾರತ ಮತ್ತು ಯುರೋಪ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದದಿಂದಾಗಿ ಕಾರುಗಳ ಮೇಲಿನ ಆಮದು ಸುಂಕ ಕ್ರಮೇಣ ಶೇ 10ಕ್ಕೆ ಇಳಿಸಲಾಗುತ್ತದೆ. ವಾರ್ಷಿಕವಾಗಿ 2.5 ಲಕ್ಷ ವಾಹನಗಳ ಆಮದಿಗೆ ಅವಕಾಶವಿರುತ್ತದೆ. ಹೀಗಾಗಿ ಭಾರತ ಯುರೋಪಿಯನ್ ಬ್ರ್ಯಾಂಡ್ಗಳಿಗೆ ದೇಶದ ಮಾರುಕಟ್ಟೆಯಲ್ಲಿ ವಿಸ್ತರಿಸಲು ಅವಕಾಶ ಕೊಡುತ್ತಿದೆ.
ಜವಳಿ ಕ್ಷೇತ್ರಕ್ಕೆ ಯುರೋಪ್ ಮಾರುಕಟ್ಟೆ
ಈ ವ್ಯಾಪಾರ ಒಪ್ಪಂದವು ಭಾರತ ಸಹಿ ಹಾಕಿರುವ ಅತ್ಯಂತ ಸಮಗ್ರ ಒಪ್ಪಂದಗಳಲ್ಲಿ ಒಂದಾಗುವ ನಿರೀಕ್ಷೆ ಇದೆ. ಭಾರತದ ಕಾರ್ಮಿಕ ಮುಖಿ ವಲಯಗಳಾದ ಸಾಗರ ಉತ್ಪನ್ನಗಳು, ಜವಳಿ, ಪಾದರಕ್ಷೆಗಳು ಮತ್ತು ಕ್ರೀಡಾ ಸಾಮಗ್ರಿಗಳಿಗೆ ಯುರೋಪಿಯನ್ ಮಾರುಕಟ್ಟೆ ತೆರೆದುಕೊಳ್ಳಲಿದೆ. ಭಾರತ ತನ್ನ ಅಟೊಮೊಬೈಲ್ ಮತ್ತು ಮದ್ಯದ ವಲಯವನ್ನು ತೆರೆಯುವ ಮೂಲಕ ಇತರ ಕ್ಷೇತ್ರಗಳಿಗೆ ಯುರೋಪಿಯನ್ ಮಾರುಕಟ್ಟೆಯನ್ನು ತೆರದುಕೊಟ್ಟಿದೆ.
ಅಮೆರಿಕದ ಸುಂಕ ರಾಜಕೀಯದ ಪ್ರತಿಫಲ
ಜಾಗತಿಕವಾಗಿ ವ್ಯಾಪಾರ ಪಾಲುದಾರರು ಹೊಸ ಮಾರುಕಟ್ಟೆಯನ್ನು ಹುಡುಕುವ ಸ್ಥಿತಿಯನ್ನು ಅಮೆರಿಕ ತಂದಿಟ್ಟಿದೆ. ಅಮೆರಿಕ ತನ್ನ ವ್ಯಾಪಾರ ನೀತಿಯಲ್ಲಿ ಮತ್ತು ಸುಂಕ ನೀತಿಯಲ್ಲಿ ನಾಟಕೀಯ ಬದಲಾವಣೆ ತಂದಿರುವುದು ಯುರೋಪ್ ಮತ್ತು ಭಾರತದ ನಡುವೆ ಮಾತುಕತೆಯ ತುರ್ತು ಅಗತ್ಯವನ್ನು ರೂಪಿಸಿತ್ತು. ಒಂದೆಡೆ ಭಾರತ ತನ್ನ ವಿದೇಶಾಂಗ ನೀತಿಗಳ ಕಾರಣದಿಂದ ಅಮೆರಿಕದಿಂದ ಹೆಚ್ಚುವರಿ ಸುಂಕವನ್ನು ಎದುರಿಸುತ್ತಿದೆ. ಅತ್ತ ಯುರೋಪ್ ತನ್ನ ಗ್ರೀನ್ಲ್ಯಾಂಡ್ ಮೇಲಿನ ಭಿನ್ನಾಭಿಪ್ರಾಯದಿಂದಾಗಿ ಅಮೆರಿಕದಿಂದ ಸುಂಕದ ಅಪಾಯವನ್ನು ಎದುರಿಸುತ್ತಿದೆ.
ಈ ನಡುವೆ ಚೀನಾದ ಸವಾಲುಗಳನ್ನು ಎದುರಿಸುವುದೂ ಭಾರತ- ಯುರೋಪ್ ನಡುವಿನ ವ್ಯಾಪಾರ ಒಪ್ಪಂದದ ಪ್ರಮುಖ ನೀತಿಯಾಗಿದೆ. ಭಾರತ ಸೌರ ಶಕ್ತಿಯ ಕ್ಷೇತ್ರದಲ್ಲಿ ವ್ಯಾಪ್ತಿಯನ್ನು ವಿಸ್ತರಿಸಲು ಬಯಸುತ್ತಿರುವಾಗ ಚೀನಾದ ಸವಾಲುಗಳನ್ನು ಎದುರಿಸುತ್ತಿದೆ. ಯೂರೋಪ್ಗೆ ನಿರ್ಣಾಯಕ ತಂತ್ರಜ್ಞಾನಗಳಲ್ಲಿ ಚೀನಾದ ಪ್ರಾಬಲ್ಯ ಸವಾಲೆನಿಸುತ್ತಿದೆ. ಹೀಗಾಗಿ ಭಾರತ ಮತ್ತು ಯುರೋಪ್ ನಡುವೆ ಒಪ್ಪಂದದಲ್ಲಿ ಚೀನಾದ ಸವಾಲು ಎದುರಿಸುವುದೂ ಮುಖ್ಯ ಪಾತ್ರವಹಿಸಿದೆ.
ಪ್ರಜಾಪ್ರಭುತ್ವದ ಬದ್ಧತೆ
ಭಾರತ-ಯುರೋಪ್ ಒಕ್ಕೂಟದ ವ್ಯಾಪಾರ ಒಪ್ಪಂದವು ವ್ಯಾಪಾರದ ಜೊತೆಗೆ ಪ್ರಜಾಪ್ರಭುತ್ವಕ್ಕೆ ಮತ್ತು ಕಾನೂನುಗಳ ನಿಯಮದ ಕುರಿತ ಬದ್ಧತೆಯನ್ನು ಬಲಪಡಿಸುತ್ತದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.
ವ್ಯಾಪಾರ ಒಪ್ಪಂದಕ್ಕಾಗಿ ಅಧಿಕೃತ ಮಟ್ಟದ ಮಾತುಕತೆಗಳು ಪೂರ್ಣಗೊಂಡಿವೆ ಮತ್ತು ಎರಡೂ ಕಡೆಯುವರು ದಿಲ್ಲಿಯಲ್ಲಿ ಭಾರತ-ಯುರೋಪ್ ಒಕ್ಕೂಟ ಶೃಂಗಸಭೆಯಲ್ಲಿ ಮಾತುಕತೆಗಳ ಯಶಸ್ವಿ ತೀರ್ಮಾನವನ್ನು ಘೋಷಿಸಿದ್ದಾರೆ. ಕಾನೂನಿನ ಹೊಣೆಗಾರಿಕೆ ಮುಗಿದ ನಂತರ ಒಪ್ಪಂದ ಕಾರ್ಯಗತಗೊಳ್ಳಲು ನಾಲ್ಕೈದು ತಿಂಗಳುಗಳು ಹಿಡಿಯಬಹುದು.







