ಇಮ್ರಾನ್ ಖಾನ್, ಬಿಲಾವಲ್ ಭುಟ್ಟೋ ಎಕ್ಸ್ ಖಾತೆಗಳಿಗೆ ಭಾರತದಲ್ಲಿ ನಿರ್ಬಂಧ

ಇಮ್ರಾನ್ ಖಾನ್ ಮತ್ತು ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ | PC : X
ಹೊಸದಿಲ್ಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಕೈಗೊಳ್ಳಲಾಗಿರುವ ಸರಣಿ ಡಿಜಿಟಲ್ ಕ್ರಮಗಳ ಭಾಗವಾಗಿ ಭಾರತ ಸರಕಾರವು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಅವರ ಎಕ್ಸ್ ಖಾತೆಗಳನ್ನು ನಿರ್ಬಂಧಿಸಿದೆ.
ಈ ವಾರದ ಆರಂಭದಲ್ಲಿ ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವ ಅತಾವುಲ್ಲಾ ತರಾರ್ ಅವರ ಎಕ್ಸ್ ಖಾತೆಯನ್ನೂ ಭಾರತದಲ್ಲಿ ನಿರ್ಬಂಧಿಸಲಾಗಿತ್ತು. ಭಾರತವು ಪಾಕಿಸ್ತಾನದ ಮೇಲೆ ಮಿಲಿಟರಿ ದಾಳಿಯನ್ನು ನಡೆಸಲು ಸಜ್ಜಾಗಿದೆ ಎಂಬ ವಿಶ್ವಾಸಾರ್ಹ ಗುಪ್ತಚರ ಮಾಹಿತಿ ಸರಕಾರದ ಬಳಿಯಿದೆ ಎಂದು ತರಾರ್ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದರು. ಅವರ ಈ ಹೇಳಿಕೆ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳನ್ನು ಇನ್ನಷ್ಟು ಹದಗೆಡಿಸಿತ್ತು.
ರಾಜಕೀಯ ನಾಯಕರೊಂದಿಗೆ ನಟಿಯರಾದ ಹಾನಿಯಾ ಆಮಿರ್ ಮತ್ತು ಮಹಿರಾ ಖಾನ್,ಜನಪ್ರಿಯ ಗಾಯಕ ಆತಿಫ್ ಅಸ್ಲಾಂ ಸೇರಿದಂತೆ ಹಲವಾರು ಪಾಕಿಸ್ತಾನಿ ಸೆಲೆಬ್ರಿಟಿಗಳ ಇನ್ಸ್ಟಾಗ್ರಾಂ ಖಾತೆಗಳನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ.
ಈ ಹಿಂದೆ ಕೇಂದ್ರ ಸರಕಾರವು ಪ್ರತಿಷ್ಠಿತ ಸುದ್ದಿಸಂಸ್ಥೆಗಳು ಮತ್ತು ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಸೇರಿದಂತೆ ಹಲವಾರು ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್ಗಳನ್ನೂ ನಿಷೇಧಿಸಿತ್ತು.





