ಮಧ್ಯಪ್ರದೇಶದಲ್ಲಿ 90 ಡಿಗ್ರಿ ತಿರುವಿನ ರೈಲ್ವೇ ಮೇಲ್ಸೇತುವೆ; ವ್ಯಾಪಕ ಟ್ರೋಲ್
ಟೀಕೆ ಬಳಿಕ ಪರಿಶೀಲಿಸುತ್ತೇವೆ ಎಂದ ಸಚಿವ

Photo credit: X/@INCKerala
ಭೋಪಾಲ್: ಮಧ್ಯಪ್ರದೇಶದ ಭೋಪಾಲ್ನ ಐಶ್ಬಾಗ್ ಕ್ರೀಡಾಂಗಣದ ಬಳಿಯಿರುವ ರೈಲ್ವೆ ಮೇಲ್ಸೇತುವೆಯ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದಾಗ ವಿವಾದಕ್ಕೆ ಸಿಲುಕಿದೆ. ಮೇಲ್ಸೇತುವೆಯ ವಿನ್ಯಾಸವು ವಾಹನ ಚಾಲಕರಿಗೆ ಅಸುರಕ್ಷಿತವಾಗಿದೆ ಎಂದು ಹಲವು ವಿಮರ್ಷಕರು ಕಳವಳ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟ್ರೋಲ್ ಗೊಳಗಾಗಿದೆ.
ಸೇತುವೆಯ ಚೂಪಾದ, ಬಹುತೇಕ 90 ಡಿಗ್ರಿ ತಿರುವಿನ ಬಗ್ಗೆ ಕಳವಳ ವ್ಯಕ್ತವಾಗಿದ್ದು, ವಾಹನಗಳು ಹತ್ತಿದ ತಕ್ಷಣ ಈ ತಿರುವನ್ನು ನಾಜೂಕಾಗಿ ಬಳಸಬೇಕಾಗುತ್ತದೆ.
ಮೇಲ್ಸೇತುವೆ ವಿನ್ಯಾಸದ ಬಗ್ಗೆ ಕಾಂಗ್ರೆಸ್ ಸಾಮಾಜಿಕ ಮಾಧ್ಯಮದಲ್ಲಿ ಟೀಕೆ ಮಾಡುತ್ತಿದ್ದಂತೆ, ರಾಜ್ಯ ಲೋಕೋಪಯೋಗಿ ಸಚಿವ ರಾಕೇಶ್ ಸಿಂಗ್ ಈ ವಿಷಯವನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದರು.
ಕಾಂಗ್ರೆಸ್ ಪಕ್ಷದ ಕಳವಳಗಳನ್ನು ಆಧಾರರಹಿತ ಮತ್ತು ರಾಜಕೀಯ ಪ್ರೇರಿತ ಎಂದು ತಳ್ಳಿಹಾಕಿದ ಅವರು, "ಸೇತುವೆಯನ್ನು ನಿರ್ಮಿಸುವಾಗಲೆಲ್ಲಾ, ಬಹಳಷ್ಟು ತಾಂತ್ರಿಕ ಪರಿಗಣನೆಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಆದ್ದರಿಂದ ಅಂತಹ ಆರೋಪಗಳಿದ್ದರೆ, ನಾವು ಅದನ್ನು ಪರಿಶೀಲಿಸುತ್ತೇವೆ" ಎಂದು ಹೇಳಿದ್ದಾರೆ.
18 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ 648 ಮೀಟರ್ ಉದ್ದ, 8.5 ಮೀಟರ್ ಅಗಲದ ಈ ಮೇಲ್ಸೇತುವೆಯು ಮಹಾಮಾಯಿ ಕಾ ಬಾಗ್, ಪುಷ್ಪಾ ನಗರ ಮತ್ತು ರೈಲ್ವೆ ನಿಲ್ದಾಣ ವಲಯದ ಜನದಟ್ಟಣೆಯ ಪ್ರದೇಶಗಳನ್ನು ನ್ಯೂ ಭೋಪಾಲ್ನೊಂದಿಗೆ ಸಂಪರ್ಕಿಸುವ ಉದ್ದೇಶವನ್ನು ಹೊಂದಿದೆ. ಇದು ರೈಲ್ವೆ ಕ್ರಾಸಿಂಗ್ಗಳಲ್ಲಿ ದೀರ್ಘ ಕಾಯುವ ಸಮಯವನ್ನು ಉಳಿತಾಯ ಮಾಡುತ್ತದೆ. ಈ ಸೇತುವೆಯು ಪ್ರತಿದಿನ ಸುಮಾರು ಮೂರು ಲಕ್ಷ ಪ್ರಯಾಣಿಕರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಅಂದಾಜಿಸಲಾಗಿದೆ.
The Over-Bridge in Madhya Pradesh with a 90° turn was inspired by... pic.twitter.com/YHG87bFqev
— Mohammed Zubair (@zoo_bear) June 11, 2025







