ವರದಕ್ಷಿಣೆಯಾಗಿ ಎಮ್ಮೆಗೆ ಬೇಡಿಕೆ ಇಟ್ಟ ಅತ್ತೆ-ಮಾವ: ಆ್ಯಸಿಡ್ ಸೇವಿಸಿ ನವವಿವಾಹಿತೆ ಆತ್ಮಹತ್ಯೆ

ಭೋಪಾಲ್: ವರದಕ್ಷಿಣೆಯನ್ನಾಗಿ ಮುರ್ರಾ ಎಮ್ಮೆಯನ್ನು ನೀಡುವಂತೆ ಅತ್ತೆ-ಮಾವ ನೀಡುತ್ತಿದ್ದ ಕಿರುಕುಳದಿಂದ ಮನನೊಂದು 21 ವರ್ಷದ ನವವಿವಾಹಿತ ಮಹಿಳೆಯೊಬ್ಬರು ಆ್ಯಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ವಿಮಲೇಶ್ ಬಘೇಲ್ ಎಂದು ಗುರುತಿಸಲಾಗಿದೆ.
ಈ ಸಂಬಂಧ ಮೃತ ಮಹಿಳೆಯ ಪತಿ ಹಾಗೂ ಆತನ ನಾಲ್ವರು ಕುಟುಂಬದ ಸದಸ್ಯರ ವಿರುದ್ಧ ಪ್ರಕರಣ ದಾಖಲಾಗಿದೆ.
ಜನವರಿ 31, 2024ರಂದು ವಿಮಲೇಶ್ ಭಗೇಲ್ ಎಂಬ ಯುವತಿ ಮಾಧೋಗಂಜ್ ನಿವಾಸಿಯಾದ ದಿನೇಶ್ ಬಘೇಲ್ ಎಂಬ ಯುವಕನನ್ನು ವಿವಾಹವಾಗಿದ್ದರು. ವಿವಾಹವಾದ ಬೆನ್ನಿಗೇ, ತಮ್ಮ ಪಶುಸಂಗೋಪನೆ ವ್ಯವಹಾರಕ್ಕೆ ನೆರವು ನೀಡಲು ಸುಮಾರು ಎರಡು ಲಕ್ಷ ರೂ. ಬೆಲೆ ಬಾಳುವ ಅತ್ಯಧಿಕ ಹಾಲು ಇಳುವರಿ ನೀಡುವ ಮುರ್ರಾ ತಳಿಯ ಎಮ್ಮೆಯನ್ನು ವರದಕ್ಷಿಣೆಯನ್ನಾಗಿ ತರುವಂತೆ ವಿಮಲೇಶ್ ಭಗೇಲ್ ಅವರಿಗೆ ಆಕೆಯ ಪತಿಯ ಕುಟುಂಬದ ಸದಸ್ಯರು ಕಿರುಕುಳ ನೀಡಲು ಆರಂಭಿಸಿದ್ದರು ಎಂದು ಆರೋಪಿಸಲಾಗಿದೆ. ತಮ್ಮ ಪುತ್ರಿಯ ಮೇಲೆ ನಿರಂತರವಾಗಿ ದೈಹಿಕ ಮತ್ತು ಮಾನಸಿಕ ದೌರ್ಜನ್ಯವೆಸಗಲಾಗಿದೆ ಎಂದು ವಿಮಲೇಶ್ ಭಗೇಲ್ ಪೋಷಕರು ಆರೋಪಿಸಿದ್ದಾರೆ.
“ನಮ್ಮ ಜಾನುವಾರು ಹಿಂಡುಗಳಿಂದ ಮುರ್ರಾ ಎಮ್ಮೆಯನ್ನು ತರುವಂತೆ ಅವರು ನಮ್ಮ ಪುತ್ರಿಯನ್ನು ಬಹುತೇಕ ಪ್ರತಿ ದಿನ ಥಳಿಸುತ್ತಿದ್ದರು. ಆಕೆ ನನಗೆ ಪದೇ ಪದೇ ಅಳುತ್ತಾ ಕರೆ ಮಾಡುತ್ತಿದ್ದಳಾದರೂ, ದೂರು ನೀಡಲು ನಿರಾಕರಿಸುತ್ತಿದ್ದಳು” ಎಂದು ವಿಮಲೇಶ್ ಭಗೇಲ್ ಕುಟುಂಬದ ಸದಸ್ಯರೊಬ್ಬರು ದೂರಿದ್ದಾರೆ.
ಸೆಪ್ಟೆಂಬರ್ 20ರಂದು ಈ ಕಿರುಕುಳ ಮತ್ತಷ್ಟು ಹಿಂಸಾತ್ಮಕವಾಗಿದೆ. ಇದಾದ ಒಂದು ದಿನದ ಬಳಿಕ, ವಿಮಲೇಶ್ ಭಗೇಲ್ ಹತಾಶೆಯಿಂದ ಆ್ಯಸಿಡ್ ಸೇವಿಸಿದ್ದಾರೆ. ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ಹೇಳಲಾಗಿದೆ.
ಸದ್ಯ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.







