ಮಹಾರಾಷ್ಟ್ರ:ಮುಸ್ಲಿಮ್ ವ್ಯಾಪಾರಿಗಳನ್ನು ಬಹಿಷ್ಕರಿಸುವ ನಿರ್ಣಯವನ್ನು ಕಾನೂನುಬಾಹಿರವಾಗಿ ಅಂಗೀಕರಿಸಿದ ಗ್ರಾಮಸಭೆ!

PC : thewire.in
ಮುಂಬೈ: ಮಹಾರಾಷ್ಟ್ರದ ಅಹಿಲ್ಯಾನಗರ (ಹಿಂದಿನ ಅಹ್ಮದ್ ನಗರ) ಜಿಲ್ಲೆಯ ಪಥ್ರಾಡಿ ತಾಲೂಕಿನ ಮಢಿ ಗ್ರಾಮದಲ್ಲಿ ನಡೆದಿದ್ದ ಗ್ರಾಮಸಭೆಯು ಗ್ರಾಮದ ಜಾತ್ರೆಯಲ್ಲಿ ಮುಸ್ಲಿಮ್ ವ್ಯಾಪಾರಿಗಳನ್ನು ಬಹಿಷ್ಕರಿಸುವ ನಿರ್ಣಯವನ್ನು ಕಾನೂನುಬಾಹಿರವಾಗಿ ಅಂಗೀಕರಿಸಿದ್ದು ಬೆಳಕಿಗೆ ಬಂದಿದೆ.
ಫೆ.22ರಂದು ಮಢಿ ಗ್ರಾಮದಲ್ಲಿ ವಿಶೇಷ ಗ್ರಾಮಸಭೆಯನ್ನು ಕರೆಯಲಾಗಿದ್ದು,ಗ್ರಾಮದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಹೊಸದಾಗಿ ಬಿಡುಗಡೆಗೊಂಡ ಅರ್ಹ ಫಲಾನುಭವಿಗಳ ಪಟ್ಟಿಯ ಕುರಿತು ಚರ್ಚೆ ಸಭೆಯ ಸ್ಪಷ್ಟ ಅಜೆಂಡಾ ಆಗಿತ್ತು. ಸಭೆಯನ್ನು ವಾಡಿಕೆಗಿಂತ ಹೊರತಾಗಿ ಹೆಚ್ಚಿನ ಗ್ರಾಮಸ್ಥರು ಮತ್ತು ಗ್ರಾಮಸಭಾ ಸದಸ್ಯರು ಕೆಲಸದ ಮೇಲೆ ಹೊರಗಿರುವ ದಿನವಾದ ರವಿವಾರ ನಡೆಸಲಾಗಿತ್ತು. ಉಪಸ್ಥಿತರಿದ್ದ ಕೆಲವೇ ಜನರು ಸಹಿ ಹಾಕುವುದರೊಂದಿಗೆ ಸಭೆಯು ಅಂತ್ಯಗೊಂಡಿತ್ತು.
ಈ ಸಹಿಗಳನ್ನು ನಂತರ ಬೇರೊಂದು ನಿರ್ಣಯವನ್ನು ಅಂಗೀಕರಿಸಲು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಅದು ಗ್ರಾಮದಲ್ಲಿಯ ಪುರಾತನ ಕಾನಿಫನಾಥ ಮಂದಿರದ ವಾರ್ಷಿಕ ಮಢಿ ಜಾತ್ರೆಯಿಂದ ಮುಸ್ಲಿಮ್ ವ್ಯಾಪಾರಿಗಳನ್ನು ಬಹಿಷ್ಕರಿಸುವ ನಿರ್ಣಯ. ಈ ಮಂದಿರವು ಹಲವಾರು ಅಲೆಮಾರಿ ಸಮುದಾಯಗಳಿಗೆ ಪ್ರಮುಖ ಪೂಜಾ ಸ್ಥಳವಾಗಿದೆ. ಕಳೆದ ಕೆಲವು ದಶಕಗಳಲ್ಲಿ ಮೂಲಭೂತ ಹಿಂದುತ್ವ ಸಂಘಟನೆಗಳ ಹೆಚ್ಚುತ್ತಿರುವ ಪ್ರಭಾವದಿಂದಾಗಿ ಇದೀಗ ‘ಹಿಂದು’ ದೇವಾಲಯವಾಗಿ ಪ್ರತಿಬಿಂಬಿಸಲ್ಪಡುತ್ತಿದೆ.
ಮಢಿ ಗ್ರಾಮದಲ್ಲಿ ಕಳೆದ 700 ವರ್ಷಗಳಿಂದಲೂ ನಡೆಯುತ್ತಿರುವ ಕಾನಿಫನಾಥ ಉತ್ಸವಕ್ಕೆ ದೇಶಾದ್ಯಂತದಿಂದ ಹೆಚ್ಚಿನ ಜನರು,ವಿಶೇಷವಾಗಿ ಅಲೆಮಾರಿ ಸಮುದಾಯಗಳ ಜನರು ಗಣನೀಯ ಸಂಖ್ಯೆಯಲ್ಲಿ ಆಗಮಿಸುತ್ತಾರೆ.
ಗ್ರಾಮದ ಸರಪಂಚ ಸಂಜಯ ಮರ್ಕಡ್ ಅವರು ಆರಂಭಿಸಿರುವ ಈ ಬಹಿಷ್ಕಾರ ಉಪಕ್ರಮವು ಗ್ರಾಮದಲ್ಲಿ ಅಶಾಂತಿಗೆ ಕಾರಣವಾಗಿದೆ. ಭಾರತದಲ್ಲಿ ಗ್ರಾಮಸಭೆಯೊಂದು ಇಂತಹ ನಿರ್ಣಯವನ್ನು ಅಂಗೀಕರಿಸುವುದು ಕಾನೂನುಬಾಹಿರ ಮತ್ತು ಸಂವಿಧಾನವಿರೋಧಿಯಾಗಿದೆ. ನಿರ್ಣಯಕ್ಕೆ ಸಹಿ ಹಾಕಿರುವ ಹೆಚ್ಚಿನವರು ಮರ್ಕಡ್ ತಮಗೆ ತಿಳಿಯದಂತೆ ತಮ್ಮ ಸಹಿಗಳನ್ನು ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಅವರ ಪೈಕಿ ಕೆಲವೇ ಜನರು ತಮಗೆ ಈ ಕ್ರಮದ ಬಗ್ಗೆ ತಿಳಿದಿತ್ತು ಮತ್ತು ತಾವು ನಿರ್ಣಯವನ್ನು ಬೆಂಬಲಿಸಿದ್ದೆವು ಎಂದು ಹೇಳಿಕೊಂಡಿದ್ದಾರೆ.
ವಿವಾದವು ಭುಗಿಲೆದ್ದ ಬಳಿಕ ಜಿಲ್ಲಾಡಳಿತವು ಈ ಬಗ್ಗೆ ಪರಿಶೀಲಿಸುವಂತೆ ಗ್ರಾಮ ಪಂಚಾಯತ್ನ ಬಿಡಿಒ ಶಿವಾಜಿ ಕಾಂಬಳೆಯವರಿಗೆ ಆದೇಶಿಸಿತ್ತು. ಪ್ರಾಥಮಿಕ ತನಿಖೆಯಂತೆ,ವಸತಿ ಯೋಜನೆಯ ಬಗ್ಗೆ ಚರ್ಚಿಸಲು ಗ್ರಾಮಸಭೆಯನ್ನು ಕರೆಯಲಾಗಿತ್ತು ಮತ್ತು ಮುಸ್ಲಿಮ್ ವ್ಯಾಪಾರಿಗಳನ್ನು ಬಹಿಷ್ಕರಿಸುವುದು ಅಜೆಂಡಾದಲ್ಲಿ ಇರಲಿಲ್ಲ ಎಂದು ಕಾಂಬಳೆ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಮಢಿಯಲ್ಲಿ ಅಂಗೀಕರಿಸಲಾಗಿರುವ ನಿರ್ಣಯವು ಸಂವಿಧಾನಬಾಹಿರವಾಗಿದ್ದು,ಅದಕ್ಕಾಗಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಬಹುದು,ಆದರೆ ಮರ್ಕಡ್ ಅಥವಾ ನಿರ್ಣಯ ಅಂಗೀಕಾರದಲ್ಲಿ ಭಾಗಿಯಾಗಿದ್ದ ಇತರ ಯಾವುದೇ ವ್ಯಕ್ತಿಯ ವಿರುದ್ಧ ಕಾನೂನು ಕ್ರಮವನ್ನು ಆರಂಭಿಸಲಾಗಿಲ್ಲ.
ಹಿಂದಿನ ವರ್ಷಗಳಲ್ಲಿ ಮುಸ್ಲಿಮ್ ವ್ಯಾಪಾರಿಗಳ ‘ಹಲವಾರು ಕ್ರಿಮಿನಲ್ ಚಟುವಟಿಕೆಗಳನ್ನು’ಗಮನದಲ್ಲಿಟ್ಟುಕೊಂಡು ಈ ನಿರ್ಣಯವನ್ನು ಅಂಗೀಕರಿಸಲಾಗಿದೆ ಎಂದು ಸಂಘ ಪರಿವಾರದ ಜೊತೆ ನಿಕಟ ನಂಟು ಹೊಂದಿರುವ ಮರ್ಕಡ್ ಸುದ್ದಿಸಂಸ್ಥೆಗೆ ತಿಳಿಸಿದರು. ಆದರೆ ತನ್ನ ಆರೋಪವನ್ನು ಪುರಾವೆಗಳೊಂದಿಗೆ ಸಮರ್ಥಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ.
ಈ ನಡುವೆ ಗ್ರಾಮಸಭೆಯ ನಿರ್ಣಯವನ್ನು ತಾವು ವಿರೋಧಿಸುತ್ತೇವೆ ಮತ್ತು ತಮಗೆ ತಿಳಿಸದೆ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ ಎಂದು ಉತ್ಸವದ ಆಯೋಜಕರು ಹೇಳಿದ್ದಾರೆ.
ಮಢಿ ಮಿಶ್ರಜಾತಿ ಮತ್ತು ಮಿಶ್ರಧರ್ಮದ ಗ್ರಾಮವಾಗಿದ್ದು,ಇಲ್ಲಿರುವ ಸುಮಾರು 3,000 ಮನೆಗಳಲ್ಲಿ 400 ಮನೆಗಳು ಮುಸ್ಲಿಮರಿಗೆ ಸೇರಿವೆ. ಬೌದ್ಧ ಸಮುದಾಯಕ್ಕೆ ಸೇರಿದವರೂ ಇಲ್ಲಿ ವಾಸವಾಗಿದ್ದು, ಅವರು ಬಹಿಷ್ಕಾರ ಪ್ರಕರಣದಲ್ಲಿ ಮುಸ್ಲಿಮರನ್ನು ಬೆಂಬಲಿಸಿದ್ದಾರೆ.
ಕಾನಿಫನಾಥ ಮಂದಿರವು ಮುಸ್ಲಿಮರ ಪಾಲಿಗೆ ಮುಸ್ಲಿಮ್ ಸಂತ ಶಾ ರಮಝಾನ್ ಮಹಿ ಸಾವರ್ ಚಿಸ್ತಿ ಅವರ ದರ್ಗಾ ಆಗಿದ್ದರೆ, ಹಿಂದುಗಳು ಅದು ಹಿಂದು ಸಂತ ಕಾನಿಫನಾಥ ಅವರ ಸಮಾಧಿ ಎಂದು ಹೇಳುತ್ತಾರೆ.







