"ನಿಮ್ಮ ಸುತ್ತ ಯಾರಿದ್ದಾರೆ ಎಂದು ಪರಿಶೀಲಿಸಿ": ರಾಜೀನಾಮೆ ವೇಳೆ ತಂದೆ ಕೆಸಿಆರ್ ಅವರಲ್ಲಿ ಕೇಳಿಕೊಂಡ ಕೆ. ಕವಿತಾ

ಕೆ ಕವಿತಾ (Photo: PTI)
ಹೈದರಾಬಾದ್: ಬಿಆರ್ಎಸ್ ಪಕ್ಷದಿಂದ ಅಮಾನತುಗೊಂಡಿದ್ದ ತೆಲಂಗಾಣ ಶಾಸಕಿ ಕೆ ಕವಿತಾ ಪಕ್ಷಕ್ಕೆ ರಾಜೀನಾಮೆಯನ್ನು ಘೋಷಿಸಿದ್ದಾರೆ.
ರಾಜೀನಾಮೆ ಕುರಿತು ಹೈದರಾಬಾದ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕವಿತಾ, ಕಲ್ವಕುಂಟ್ಲ ಕುಟುಂಬ ಮತ್ತು ಬಿಆರ್ಎಸ್ ಅನ್ನು ಒಡೆಯಲು ಪಿತೂರಿ ನಡೆಯುತ್ತಿದೆ ಎಂದು ಕಣ್ಣೀರು ಹಾಕಿದರು.
"ನನಗೆ ಹುದ್ದೆ ಮೇಲೆ ದುರಾಸೆ ಇಲ್ಲ. ನಾನು ಬಿಆರ್ಎಸ್ಗೆ ರಾಜೀನಾಮೆ ನೀಡುತ್ತಿದ್ದೇನೆ ಮತ್ತು ರಾಜ್ಯ ವಿಧಾನ ಪರಿಷತ್ತಿಗೂ ರಾಜೀನಾಮೆ ಸಲ್ಲಿಸುತ್ತಿದ್ದೇನೆ” ಎಂದು ಕವಿತಾ ಅವರು ಹೇಳಿದ್ದಾರೆ.
ತನ್ನ ತಂದೆ ಕೆಸಿಆರ್ ಅವರಿಗೆ "ನಿಮ್ಮ ಸುತ್ತ ಯಾರಿದ್ದಾರೆ ಎಂದು ಪರಿಶೀಲಿಸಿ" ಎಂದು ಮನವಿ ಮಾಡಿದ ಕವಿತಾ, ಪಕ್ಷದಿಂದ ನನ್ನನ್ನು ಅಮಾನತುಗೊಳಿಸಿರುವುದಲ್ಲಿ ಸೋದರಸಂಬಂಧಿಗಳು ಮತ್ತು ಬಿಆರ್ಎಸ್ ನಾಯಕರಾದ ಟಿ ಹರೀಶ್ ರಾವ್ ಮತ್ತು ಸಂತೋಷ್ ಕುಮಾರ್ ಅವರ ಪಾತ್ರವಿದೆ ಎಂದು ಆರೋಪಿಸಿದ್ದಾರೆ.
ಕೆ ಕವಿತಾ ಅವರನ್ನು ಭಾರತ ರಾಷ್ಟ್ರ ಸಮಿತಿ ಪಕ್ಷದಿಂದ ಮಂಗಳವಾರ ಪಕ್ಷದ ಮುಖ್ಯಸ್ಥ ಕೆ ಚಂದ್ರಶೇಖರ ರಾವ್ ಅವರು ಅಮಾನತುಗೊಳಿಸಿದ್ದರು.





