ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ಮೋದಿ ವಿದೇಶ ಪ್ರವಾಸಗಳಿಗೆ 254 ಕೋಟಿ ರೂ.ವೆಚ್ಚ

ನರೇಂದ್ರ ಮೋದಿ | Photo : PTI
ಹೊಸದಿಲ್ಲಿ: ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿದೇಶ ಪ್ರವಾಸಗಳಿಗೆ 254.87 ಕೋ.ರೂ.ಗಳನ್ನು ವೆಚ್ಚ ಮಾಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸಂಸತ್ತಿನಲ್ಲಿ ತಿಳಿಸಿದೆ.
ಗುರುವಾರ ರಾಜ್ಯಸಭೆಯಲ್ಲಿ ಸಹಾಯಕ ವಿದೇಶಾಂಗ ವ್ಯವಹಾರಗಳ ಸಚಿವ ವಿ.ಮುರಳೀಧನ್ ಅವರು ಆಪ್ ಸಂಸದ ಸಂಜಯ ಸಿಂಗ್ ಅವರ ಲಿಖಿತ ಪ್ರಶ್ನೆಗೆ ನೀಡಿದ ಉತ್ತರದಲ್ಲಿ,ಲಭ್ಯ ಮಾಹಿತಿಯಂತೆ ಕಳೆದ ಐದು ವರ್ಷಗಳಲ್ಲಿ ಪ್ರಧಾನಿಯವರ ವಿದೇಶ ಪ್ರವಾಸಗಳಿಗಾಗಿ 2,54,87,01,373 ರೂ.ಗಳನ್ನು ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.
ಈ ವರ್ಷದ ಫೆಬ್ರವರಿಯಲ್ಲಿ ರಾಜ್ಯಸಭೆಯಲ್ಲಿ ರಾಷ್ಟ್ರಪತಿ, ಪ್ರಧಾನಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವರ ವಿದೇಶ ಪ್ರಯಾಣಗಳ ವೆಚ್ಚದ ಕುರಿತು ಲಿಖಿತ ಪ್ರಶ್ನೆಗೆ ನೀಡಿದ್ದ ಉತ್ತರದಲ್ಲಿ ಸಚಿವಾಲಯವು 2019, ಫೆ.21 ಮತ್ತು 2022,ನ.16ರ ನಡುವೆ ರಾಷ್ಟ್ರಪತಿ, ಪ್ರಧಾನಿ ಮತ್ತು ವಿದೇಶಾಂಗ ಸಚಿವರ ವಿದೇಶ ಪ್ರವಾಸಗಳಿಗೆ ಸರಕಾರವು ಅನುಕ್ರಮವಾಗಿ 6,24,31,424 ರೂ.,22,76,76,934 ರೂ. ಮತ್ತು 20,87,01,475 ರೂ.ಗಳನ್ನು ವೆಚ್ಚ ಮಾಡಿದೆ ಎಂದು ತಿಳಿಸಿತ್ತು. ಲಿಖಿತ ಉತ್ತರವು ಮೋದಿಯವರು ಈ ಅವಧಿಯಲ್ಲಿ ಭೇಟಿ ನೀಡಿದ್ದ 21 ದೇಶಗಳ ಪಟ್ಟಿಯನ್ನೂ ಒಳಗೊಂಡಿತ್ತು.
ಗುರುವಾರ ಸಿಪಿಎಂ ಸಂಸದ ವಿ.ಶಿವದಾಸನ್ ಅವರ ಪ್ರಶ್ನೆಗೆ ಪ್ರತ್ಯೇಕ ಉತ್ತರದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಲಭ್ಯ ಮಾಹಿತಿಯಂತೆಫೆ.2021ರಿಂದ ಜೂ.2023ರವರೆಗೆ ಮೋದಿಯವರ ವಿದೇಶ ಪ್ರವಾಸಗಳಿಗೆ 30,80,47,075 ರೂ.ಗಳನ್ನು ವೆಚ್ಚ ಮಾಡಲಾಗಿದೆ ಎಂದೂ ತಿಳಿಸಿದೆ. ಈ ಅವಧಿಯಲ್ಲಿ 2021,ಮಾ.26-27ರ ನಡುವೆ ಬಾಂಗ್ಲಾದೇಶ ಪ್ರವಾಸದಿಂದ ಹಿಡಿದು 2023, ಜೂ.20-15ರ ನಡುವೆ ಅಮೆರಿಕ ಮತ್ತು ಈಜಿಪ್ಟ್ ಪ್ರವಾಸದವರೆಗೆ ಮೋದಿಯವರು ಭೇಟಿ ನೀಡಿದ್ದ 20 ದೇಶಗಳನ್ನೂ ಉತ್ತರವು ಪಟ್ಟಿ ಮಾಡಿದೆ.
ಈ ಎರಡು ಉತ್ತರಗಳು ಫೆ.2019 ಮತ್ತು ಜೂ.2023ರ ನಡುವೆ ಪ್ರಧಾನಿಯವರ ವಿದೇಶ ಪ್ರವಾಸಗಳಿಗೆ ಅಂದಾಜು 50 ಕೋ.ರೂ.ಗಳನ್ನು ವೆಚ್ಚ ಮಾಡಲಾಗಿದೆ ಎನ್ನುವುದನ್ನು ಸೂಚಿಸುತ್ತಿವೆ. ಆದರೆ ಕಳೆದ ಐದು ವರ್ಷಗಳಲ್ಲಿ ಪ್ರಧಾನಿಯವರ ವಿದೇಶ ಪ್ರವಾಸಗಳ ವೆಚ್ಚದ ಕುರಿತು ಪ್ರಶ್ನೆಗೆ ನೀಡಲಾಗಿರುವ ಉತ್ತರವು 200 ಕೋ.ರೂ.ಗಳ ಅಧಿಕ ವೆಚ್ಚವನ್ನು, ಅಂದರೆ 254 ಕೋ.ರೂ.ಗಳನ್ನು ತೋರಿಸಿದೆ.
2018, ಜು.19ರಂದು ಆಗಿನ ಸಹಾಯಕ ವಿದೇಶಾಂಗ ವ್ಯವಹಾರಗಳ ಸಚಿವ ವಿ.ಕೆ.ಸಿಂಗ್ ಅವರು 2024,ಜೂ.15ರಿಂದ 2018,ಜೂ.10ರ ನಡುವಿನ ಅವಧಿಯಲ್ಲಿ ಮೋದಿಯವರ ವಿದೇಶ ಪ್ರವಾಸಗಳಿಗೆ 1,484 ಕೋ.ರೂ.ಗ:ಳನ್ನು ವೆಚ್ಚ ಮಾಡಲಾಗಿದೆ ಎಂದು ರಾಜ್ಯಸಭೆಯಲ್ಲಿ ಹೇಳಿಕೆಯೊಂದರಲ್ಲಿ ತಿಳಿಸಿದ್ದರು.
ಪಿಎಂ ಇಂಡಿಯಾ ವೆಬ್ಸೈಟ್ ನಲ್ಲಿ ಲಭ್ಯ ವಿವರಗಳಂತೆ ಮೋದಿಯವರು 2014ರಲ್ಲಿ ಮೊದಲ ಬಾರಿಗೆ ಪ್ರಧಾನಿ ಹುದ್ದೆಗೇರಿದ ಬಳಿಕ 71 ವಿದೇಶ ಪ್ರವಾಸಗಳನ್ನು ಮಾಡಿದ್ದಾರೆ. 2014,ಜೂನ್ ನಲ್ಲಿ ಭೂತಾನದಿಂದ ಹಿಡಿದು ಕಳೆದ ತಿಂಗಳು ಅಮೆರಿಕ ಮತ್ತು ಈಜಿಪ್ಟ್ ವರೆಗೆ ಮೋದಿಯವರ ವಿದೇಶಿ ಭೇಟಿಗಳನ್ನು ವೆಬ್ಸೈಟ್ ಪಟ್ಟಿ ಮಾಡಿದೆ. ಅಲ್ಲಿಂದೀಚೆಗೆ ಈ ತಿಂಗಳಲ್ಲಿ ಮೋದಿ ಫ್ರಾನ್ಸ್ ಮತ್ತು ಯುಎಇಗೆ ಭೇಟಿ ನೀಡಿದ್ದಾರೆ.
ಪಿಎಂ ಇಂಡಿಯಾ ವೆಬ್ಸೈಟ್ನಲ್ಲಿ ಲಭ್ಯ ಅಂಕಿಅಂಶಗಳಂತೆ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ಮೇ 2004 ಮತ್ತು ಮೇ 2014ರ ನಡುವಿನ ತನ್ನ 10 ವರ್ಷಗಳ ಅಧಿಕಾರಾವಧಿಯಲ್ಲಿ 73 ದೇಶಗಳಿಗೆ ಭೇಟಿ ನೀಡಿದ್ದರು.
ಕಳೆದ ಒಂಬತ್ತು ವರ್ಷಗಳಲ್ಲಿ ಪ್ರತಿಪಕ್ಷಗಳು ಮೋದಿಯವರ ಪದೇ ಪದೇ ವಿದೇಶ ಪ್ರವಾಸಗಳನ್ನು ಪ್ರಶ್ನಿಸುತ್ತಲೇ ಇವೆ.
ಇತ್ತೀಚಿನ ತಿಂಗಳುಗಳಲ್ಲಿ ಮೋದಿಯವರ ವಿದೇಶ ಪ್ರವಾಸಗಳಲ್ಲಿ ಎಷ್ಟು ಸಲ ಗೌತಮ ಅದಾನಿಯವರು ಅವರ ಜೊತೆಯಲ್ಲಿ ಪ್ರಯಾಣಿಸಿದ್ದರು ಎನ್ನುವುದನ್ನೂ ಪ್ರತಿಪಕ್ಷಗಳು ಪ್ರಶ್ನಿಸಿವೆ.
ಅದಾನಿ ಗ್ರೂಪ್ ವಿರುದ್ಧ ಹಿಂಡೆನ್ಬರ್ಗ್ ರೀಸರ್ಚ್ ಮಾಡಿರುವ ಆರೋಪಗಳ ಕುರಿತು ಜಂಟಿ ಸಂಸದೀಯ ಸಮಿತಿಯಿಂದ ತನಿಖೆಗೆ ಪ್ರತಿಪಕ್ಷಗಳು ಆಗ್ರಹಿಸಿದ ಬೆನ್ನಿಗೇ ಈ ಪ್ರಶ್ನೆಗಳನ್ನು ಕೇಳಲಾಗಿತ್ತು.
ವಿದೇಶ ಪ್ರವಾಸಗಳಲ್ಲಿ ಮೋದಿಯವರ ಜೊತೆಯಲ್ಲಿದ್ದ ವ್ಯಕ್ತಿಗಳ ಕುರಿತು ಆರ್ಟಿಐ ವಿಚಾರಣೆಗೆ ಉತ್ತರಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ನಿರಾಕರಿಸಿದೆ ಎಂದು ಸುದ್ದಿ ಜಾಲತಾಣ ದಿ ವೈರ್ 2018ರಲ್ಲಿ ವರದಿ ಮಾಡಿತ್ತು.
ಮಾಹಿತಿಯನ್ನು ಒದಗಿಸಲು ನಿರಾಕರಣೆಯು ಕೇಂದ್ರ ಮಾಹಿತ ಆಯೋಗದ ಆದೇಶದ ಉಲ್ಲಂಘನೆಯಾಗಿದೆ. 2014-15ರಿಂದ ವಿದೇಶ ಪ್ರವಾಸಗಳಲ್ಲಿ ಮೋದಿಯವರೊಂದಿಗೆ ತೆರಳಿದ್ದ ಸರಕಾರಿ ಮತ್ತು ಖಾಸಗಿ ವ್ಯಕ್ತಿಗಳ ಹೆಸರುಗಳನ್ನು ಬಹಿರಂಗಗೊಳಿಸುವಂತೆ ಅದು ಆದೇಶದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಸೂಚಿಸಿತ್ತು.







