ಲೋಕಸಭೆಯಲ್ಲಿ ಪೌರತ್ವಕ್ಕೆ ಮಾನ್ಯ ಗುರುತಿನ ದಾಖಲೆಗಳನ್ನು ಸ್ಪಷ್ಟಪಡಿಸುವುದರಿಂದ ದೂರವುಳಿದ ಸರಕಾರ

Photo credit: PTI
ಹೊಸದಿಲ್ಲಿ: ಮಂಗಳವಾರ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಂದರ್ಭದಲ್ಲಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್ಎ)ವು ಭಾರತೀಯ ಪೌರತ್ವವನ್ನು ಸಾಬೀತುಗೊಳಿಸಲು ಅಗತ್ಯವಾದ ಮಾನ್ಯ ದಾಖಲೆಗಳ ವರ್ಗಗಳನ್ನು ನಿರ್ದಿಷ್ಟವಾಗಿ ತಿಳಿಸಲಿಲ್ಲ. ಪೌರತ್ವವು 1955ರ ಪೌರತ್ವ ಕಾಯ್ದೆ ಮತ್ತು ಅದರ ನಿಯಮಗಳಿಗೆ ಒಳಪಟ್ಟಿದೆ ಎಂದಷ್ಟೇ ಅದು ಹೇಳಿದೆ.
1998 ಮತ್ತು 1999ರಲ್ಲಿ ಬಿಹಾರದಲ್ಲಿ ದಾಖಲಾದ ಜನನಗಳ ಸಂಖ್ಯೆ ಲಭ್ಯವಿಲ್ಲ ಎಂದೂ ಅದು ತಿಳಿಸಿತು.
ಪ್ರಸ್ತುತ ಬಿಹಾರದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ನಡೆಯುತ್ತಿದ್ದು,ಮತದಾರರ ಪಟ್ಟಿಯಲ್ಲಿ ಸೇರ್ಪಡೆಗಾಗಿ 11 ದಾಖಲೆಗಳನ್ನು ಚುನಾವಣಾ ಆಯೋಗವು ಪಟ್ಟಿ ಮಾಡಿದ್ದು, ಇವುಗಳಲ್ಲಿ ಜನನ ಪ್ರಮಾಣ ಪತ್ರಗಳೂ ಸೇರಿವೆ.
ಸಿಪಿಐ-ಎಲ್ ಸದಸ್ಯ ಸುದಾಮ ಪ್ರಸಾದ್ ಅವರ ಪ್ರಶ್ನೆಗೆ ಸಚಿವಾಲಯ ಉತ್ತರಿಸಿತು.
ಭಾರತದಲ್ಲಿ ಪೌರತ್ವವನ್ನು ಸಾಬೀತುಗೊಳಿಸಲು ಜನರಿಗೆ ಅಗತ್ಯವಿರುವ ಮಾನ್ಯ ದಾಖಲೆಗಳ ವರ್ಗಗಳ ವಿವರಗಳನ್ನು ಮತ್ತು ಕಳೆದ 10 ವರ್ಷಗಳಲ್ಲಿ ದೇಶಾದ್ಯಂತ ನೀಡಲಾದ ಒಟ್ಟು ಜನನ ಪ್ರಮಾಣಪತ್ರಗಳ ಸಂಖ್ಯೆ ಹಾಗೂ ಜನನ ಮತ್ತು ಮರಣಗಳ ಸಂಖ್ಯೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರಗಳಿಂದ ಜನನ ಮತ್ತು ಮರಣ ಪ್ರಮಾಣಪತ್ರಗಳ ಕಡಿಮೆ ವಿತರಣೆಯ ವರದಿಗಳನ್ನು ಸರಕಾರವು ಸ್ವೀಕರಿಸಿದೆಯೇ ಎನ್ನುವುದನ್ನು ತಿಳಿಯಲು ಬಯಸಿದ್ದ ಪ್ರಸಾದ್, ಅಗ್ರ 10 ರಾಜ್ಯಗಳ ಪಟ್ಟಿಯನ್ನು ಕೇಳಿದ್ದರು.
ಭಾರತೀಯ ಪೌರತ್ವವು 1955ರ ಪೌರತ್ವ ಕಾಯ್ದೆ ಮತ್ತು ಅದರಡಿಯಲ್ಲಿ ರಚಿಸಲಾದ ನಿಯಮಗಳಿಂದ ನಿಯಂತ್ರಿಸಲ್ಪಡುತ್ತದೆ ಎಂದು ಸಹಾಯಕ ಗೃಹಸಚಿವ ನಿತ್ಯಾನಂದ ರಾಯ್ ಅವರು ಲಿಖಿತ ಉತ್ತರದಲ್ಲಿ ತಿಳಿಸಿದರು.
ಸ್ವೀಕಾರಾರ್ಹ ದಾಖಲೆಗಳನ್ನು ನಿರ್ದಿಷ್ಟವಾಗಿ ತಿಳಿಸುವ ಗೋಜಿಗೆ ಹೋಗದ ರಾಯ್,ಪೌರತ್ವ ಕಾಯ್ದೆಯಡಿ ಜನನ(ಕಲಂ 3),ವಂಶಾವಳಿ(ಕಲಂ 4),ನೋಂದಣಿ(ಕಲಂ 5),ನೈಸರ್ಗೀಕರಣ(ಕಲಂ 6) ಅಥವಾ ಪ್ರಾದೇಶಿಕ ಸಂಯೋಜನೆ(ಕಲಂ 7)ಯ ಮೂಲಕ ಪೌರತ್ವವನ್ನು ಪಡೆಯಬಹುದು. ಪೌರತ್ವವನ್ನು ಪಡೆದುಕೊಳ್ಳಲು ಮತ್ತು ನಿರ್ಧರಿಸಲು ಅರ್ಹತಾ ಮಾನದಂಡಗಳು 1955ರ ಪೌರತ್ವ ಕಾಯ್ದೆಯ ನಿಬಂಧನೆಗಳು ಮತ್ತು ಅದರಡಿ ರಚಿಸಲಾದ ನಿಯಮಗಳಿಗೆ ಅನುಗುಣವಾಗಿವೆ ಎಂದು ತಿಳಿಸಿದರು.
ಜನನ ಮತ್ತು ಮರಣಗಳ ನೋಂದಣಿಯನ್ನು ಕೇಂದ್ರೀಯ ಶಾಸನ ‘ಜನನ ಮತ್ತು ಮರಣಗಳ ನೋಂದಣಿ ಕಾಯ್ದೆ,1969’ರಡಿ ನಡೆಸಲಾಗುತ್ತದೆ. ರಾಜ್ಯಗಳ ನೋಂದಣಿ ಅಧಿಕಾರಿಗಳಿಂದ ಸ್ವೀಕರಿಸಲಾದ ನೋಂದಾಯಿತ ಜನನ ಮತ್ತು ಮರಣ ವರದಿಗಳನ್ನು ಆಧರಿಸಿ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಚೇರಿಯು ನಾಗರಿಕ ನೋಂದಣಿ ವ್ಯವಸ್ಥೆ ಆಧಾರಿತ ಭಾರತದ ಪ್ರಮುಖ ಅಂಕಿಅಂಶಗಳು’ ಎಂಬ ವಾರ್ಷಿಕ ವರದಿಯನ್ನು ಪ್ರಕಟಿಸುತ್ತದೆ ಎಂದು ಉತ್ತರದಲ್ಲಿ ತಿಳಿಸಿದ ರಾಯ್,1998-2000ರ ಅವಧಿಯಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಒಟ್ಟು ನೋಂದಾಯಿತ ಜನನ/ಮರಣಗಳಲ್ಲಿ 1998 ಮತ್ತು 1999ರ ಬಿಹಾರದ ಅಂಕಿಅಂಶಗಳು ಸೇರಿಲ್ಲ ಎಂದು ಹೇಳಿದರು.
2001ರಲ್ಲಿ ಒಟ್ಟು ನೋಂದಾಯಿತ ಜನನ/ಸಾವುಗಳಲ್ಲಿ ಉತ್ತರ ಪ್ರದೇಶ ಮತ್ತು ಉತ್ತರಾಖಂಡಗಳ ಅಂಕಿಅಂಶಗಳು ಸೇರಿರಲಿಲ್ಲ. ಇದೇ ರೀತಿ 2002-2023ರ ಉತ್ತರಾಖಂಡ, 2005 ಹಾಗೂ 2007-2009ರ ತ್ರಿಪುರಾ, 2012ರ ಜಮ್ಮುಕಾಶ್ಮೀರ ಮತ್ತು 2016ರಲ್ಲಿ ಮಣಿಪುರ ಹಾಗೂ ಮೇಘಾಲಯಗಳ ಅಂಕಿಅಂಶಗಳು ಲಭ್ಯವಿಲ್ಲ ಎಂದರು.







