ಕೆಂಪು ಕೋಟೆ ಬಳಿ ಸ್ಫೋಟ ಪ್ರಕರಣ | ಯಾವುದೇ ಪುರಾವೆಗಳಿಲ್ಲ; ಮೂವರು ವೈದ್ಯರು ಸೇರಿ ನಾಲ್ವರನ್ನು ಬಿಡುಗಡೆ ಮಾಡಿದ NIA

ಅಲ್-ಫಲಾಹ್ ವಿಶ್ವವಿದ್ಯಾಲಯ | Photo Credit : PTI
ಹೊಸದಿಲ್ಲಿ: ಕೆಂಪು ಕೋಟೆ ಸಮೀಪ ನ. 10ರಂದು ನಡೆದ ಭೀಕರ ಸ್ಫೋಟ ಪ್ರಕರಣದಲ್ಲಿ ಬಂಧಿತರಾಗಿದ್ದ ಮೂವರು ವೈದ್ಯರು ಸೇರಿದಂತೆ ನಾಲ್ವರನ್ನು ರವಿವಾರ ಬಿಡುಗಡೆ ಮಾಡಲಾಗಿದೆ. ಯಾವುದೇ ದೃಢ ಪುರಾವೆಗಳು ಲಭ್ಯವಾಗದ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಿಡುಗಡೆ ಮಾಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ ಎಂದು India Today ವರದಿ ಮಾಡಿದೆ.
ಹರಿಯಾಣದ ನುಹ್ ನಲ್ಲಿ ಬಂಧಿಸಲಾಗಿದ್ದ ಡಾ. ರೆಹಾನ್, ಡಾ. ಮುಹಮ್ಮದ್, ಡಾ. ಮುಸ್ತಕೀಮ್ ಹಾಗೂ ರಸಗೊಬ್ಬರ ವ್ಯಾಪಾರಿ ದಿನೇಶ್ ಸಿಂಗ್ಲಾ, ಈ ನಾಲ್ವರೂ ಬಾಂಬ್ ಸ್ಪೋಟ ಪ್ರಕರಣದ ಪ್ರಮುಖ ಆರೋಪಿ ಡಾ. ಉಮರ್ ಉನ್ ನಬಿಯೊಂದಿಗೆ ಸಂಪರ್ಕ ಹೊಂದಿದ್ದರು ಎಂಬ ಶಂಕೆಯಲ್ಲಿ ಬಂಧಿತರಾಗಿದ್ದರು. ಅಲ್-ಫಲಾಹ್ ವಿಶ್ವವಿದ್ಯಾಲಯದೊಂದಿಗೆ ಇವರ ಸಂಪರ್ಕ, ಹಾಗೂ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಇವರ ವಿಚಾರಣೆ ನಡೆಯುತ್ತಿತ್ತು.
ರಸಗೊಬ್ಬರ ವ್ಯಾಪಾರಿಯಿಂದ ಸ್ಫೋಟಕ ತಯಾರಿಕೆಗೆ ಅಗತ್ಯವಾದ ರಸಾಯನಿಕಗಳನ್ನು ಪಡೆಯಲಾಗಿದೆಯೇ ಎಂಬುದನ್ನು NIA ಪರಿಶೀಲಿಸಿತ್ತು. ಆದರೆ ಮೂರು ದಿನಗಳ ವಿಚಾರಣೆಯ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರಿಗೆ ಸಂಪರ್ಕವಿರುವುದಕ್ಕೆ ಯಾವುದೇ ಪುರಾವೆ ತನಿಖಾಧಿಕಾರಿಗಳಿಗೆ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ. ನಾಲ್ವರು ಬಿಡುಗಡೆಯಾಗಿದ್ದಾರೆ ಎಂದು ಕುಟುಂಬ ಸದಸ್ಯರು ದೃಢಪಡಿಸಿದರೂ, ಈ ಕುರಿತು ಹೆಚ್ಚಿನ ಪ್ರತಿಕ್ರಿಯೆ ನೀಡಲಿಲ್ಲ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.





