ಧೀರಜ್ ಸಾಹು ಮೇಲಿನ ಆದಾಯ ತೆರಿಗೆ ದಾಳಿ 6ನೇ ದಿನವೂ ಮುಂದುವರಿಕೆ
ಧೀರಜ್ ಸಾಹು | Photo : PTI
ಭುವನೇಶ್ವರ: ಝಾರ್ಖಂಡ್ ನ ಕಾಂಗ್ರೆಸ್ ಸಂಸದ ಧೀರಜ್ ಸಾಹುಗೆ ಸಂಬಂಧಪಟ್ಟ ಕಟ್ಟಡಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ನಡೆಸುತ್ತಿರುವ ದಾಳಿಯು ಆರನೇ ದಿನವಾದ ಸೋಮವಾರವೂ ಮುಂದುವರಿದಿದೆ. ಸೋಮವಾರ ಅಧಿಕಾರಿಗಳು ಒಡಿಶಾದ ಬಲಂಗಿರ್ ನಲ್ಲಿರುವ ಸಂಸದನಿಗೆ ಸಂಬಂಧಪಟ್ಟ ಕಂಪೆನಿಯೊಂದರಲ್ಲಿ ಶೋಧ ನಡೆಸಿದ್ದಾರೆ.
ಒಡಿಶಾ ಮತ್ತು ಝಾರ್ಖಂಡ್ ರಾಜ್ಯಗಳ ವಿವಿಧ ಸ್ಥಳಗಳಲ್ಲಿ ಸಾಹುಗೆ ಸೇರಿದ ಕಟ್ಟಡಗಳಲ್ಲಿ ನಡೆಸಲಾಗಿರುವ ದಾಳಿಗಳ ವೇಳೆ ಆದಾಯ ತೆರಿಗೆ ಇಲಾಖೆಯು 353 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಂಡಿದೆ. ತನಿಖಾ ಸಂಸ್ಥೆಯೊಂದು ಒಂದು ಕಾರ್ಯಾಚರಣೆಯಲ್ಲಿ ಇಷ್ಟೊಂದು ಪ್ರಮಾಣದ ನಗದನ್ನು ವಶಪಡಿಸಿಕೊಂಡಿರುವುದು ಇದೇ ಮೊದಲು ಎಂದು ಅಧಿಕಾರಿಗಳು ಹೇಳಿದ್ದಾರೆ.
ವಶಪಡಿಸಿಕೊಂಡಿರುವ ಎಲ್ಲಾ ನಗದನ್ನು ಆದಾಯ ತೆರಿಗೆ ಅಧಿಕಾರಿಗಳು ಒಡಿಶಾದ ಬಲಂಗಿರ್ನಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್ ನ ಪ್ರಧಾನ ಶಾಖೆಯಲ್ಲಿ ಠೇವಣಿಯಾಗಿ ಇಡಲಿದ್ದಾರೆ.
ಒಡಿಶಾದಲ್ಲಿರುವ, ಸಾಹುಗೆ ಸೇರಿರುವ ಡಿಸ್ಟಿಲರಿ ಕಂಪೆನಿಯೊಂದರ ಮೇಲೆ ಆರು ದಿನಗಳ ಹಿಂದೆ ನಡೆದ ದಾಳಿಯ ವೇಳೆ ಅಪಾರ ಪ್ರಮಾಣದ ನಗದು ಪತ್ತೆಯಾಗಿದೆ. ದಾಳಿ ಇನ್ನೂ ಮುಂದುವರಿಯುತ್ತಿದೆ.
ತೆರಿಗೆ ವಂಚನೆ ಮತ್ತು ದಾಖಲೆರಹಿತ ವ್ಯವಹಾರಗಳನ್ನು ನಡೆಸುತ್ತಿದೆ ಎನ್ನುವ ಆರೋಪದಲ್ಲಿ ಬೋದ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್, ಅದರ ಮಾಲೀಕರು ಮತ್ತು ಸಂಬಂಧಿಸಿದ ಇತರರ ಮೇಲೆ ಡಿಸೆಂಬರ್ 6 ರಂದು ಆದಾಯ ತೆರಿಗೆ ದಾಳಿ ಆರಂಭಗೊಂಡಿತ್ತು. ಅದು ಈಗಲೂ ಮುಂದುವರಿಯುತ್ತಿದೆ.
ವಶಪಡಿಸಿಕೊಳ್ಳಲಾಗಿರುವ ಹಣವು, ಡಿಸ್ಟಿಲರಿಯು ದೇಶಿ ಮದ್ಯವನ್ನು ನಗದು ವ್ಯವಹಾರದಲ್ಲಿ ಮಾರಾಟ ಮಾಡಿ ಬಂದ ‘‘ದಾಖಲೆರಹಿತ’’ ಹಣವಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಭಾವಿಸಿದೆ.