ಮುಂಗಾರು ಮಳೆ ಹೆಚ್ಚಳಕ್ಕೂ ಆರ್ಕ್ಟಿಕ್ ಹಿಮಕರಗುವಿಕೆಗೂ ನಂಟು | NCPOR ಸಂಶೋಧನಾ ವರದಿ

ಸಾಂದರ್ಭಿಕ ಚಿತ್ರ | PC : PTI
ಬೆಂಗಳೂರು : ಬೇಸಗೆಯಲ್ಲಿ ಮುಂಗಾರು ಮಳೆಯ ಪ್ರಮಾಣ ಹೆಚ್ಚಳವಾಗುತ್ತಿರುವುದಕ್ಕೂ, ಮಾರ್ಚ್ ನಿಂದ ಮೇ ತಿಂಗಳುಗಳವರೆಗೆ ಆರ್ಕ್ಟಿಕ್ ವಲಯದ ಹಿಮಕರಗುವುದರ ನಡುವೆ ನಂಟಿರುವುದನ್ನು ಗೋವಾದ ರಾಷ್ಟ್ರೀಯ ಧ್ರುವಪ್ರದೇಶ ಹಾಗೂ ಸಾಗರ ಸಂಶೋಧನಾ ಕೇಂದ್ರ ( NCPOR), ಕೊರಿಯ ಧ್ರುವಪ್ರದೇಶ ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ ನಡೆಸಿದ ಸಂಶೋಧನಾ ವರದಿಯೊಂದು ಬಹಿರಂಗಪಡಿಸಿದೆ.
ಬೇಸಗೆಯಲ್ಲಿ ಆರ್ಕ್ಟಿಕ್ ಸಮುದ್ರಪ್ರದೇಶದಲ್ಲಿ ಹಿಮಕರಗುವುದಕ್ಕೂ ಹಾಗೂ ಭಾರತದಲ್ಲಿ ಬೇಸಗೆಯಲ್ಲಿ ಮುಂಗಾರು ಮಳೆ ಸುರಿಯವುವಿಕೆಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವುದಕ್ಕೂ ಗಣನೀಯವಾದ ನಂಟಿದೆಯೆಂದು ಎನ್ಸಿಪಿಓಆರ್ ವಿಜ್ಞಾನಿ ಹಾಗೂ ಬಾತ್ಮಿದಾರ ಲೇಖಕ ಅವಿನಾಶ್ ಕುಮಾರ್ ವರದಿಯಲ್ಲಿ ತಿಳಿಸಿದ್ದಾರೆ.
‘‘ಭಾರತೀಯ ಮುಂಗಾರು ಮಳೆಯ ಮೇಲೆ ಪ್ರಾಂತೀಯ ಬೇಸಗೆ ಆರ್ಕ್ಟಿಕ್ ಸಾಗರದಲ್ಲಿ ಹಿಮಕರಗುವಿಕೆಯ ಪ್ರಮಾಣದಲ್ಲಿ ವ್ಯತಿರಿಕ್ತ ಪರಿಣಾಮ ’’ ಎಂಬ ಶೀರ್ಷಿಕೆಯ ಪ್ರಬಂಧದಲ್ಲಿ ಈ ವಿಷಯವನ್ನು ಬಹಿರಂಗಪಡಿಸಲಾಗಿದೆ. ಪ್ರತಿಷ್ಠಿತ ‘ರಿಮೋಟ್ ಸೆನ್ಸಿಂಗ್ ಆಫ್ ಎನ್ವಾಯಿರಾನ್ಮೆಂಟ್’ ಎಂಬ ಪರಿಸರ ವಿಜ್ಞಾನ ನಿಯತಕಾಲಿಕದ ಜೂನ್ ಸಂಚಿಕೆಯಲ್ಲಿ ಈ ಪ್ರಬಂಧ ಪ್ರಕಟವಾಗಿದೆ.ಕೇಂದ್ರ ಆರ್ಕ್ಟಿಕ್ ಪ್ರದೇಶದಲ್ಲಿ ಸಮುದ್ರ ಹಿಮದ ಪ್ರಮಾಣದಲ್ಲಿ ಇಳಿಕೆಯಾಗಿರುವುದಕ್ಕೂ, ಮಧ್ಯ ಹಾಗೂ ಈಶಾನ್ಯ ಭಾರತದಲ್ಲಿ ಮಳೆಯ ಪ್ರಮಾಣದಲ್ಲಿ ಹೆಚ್ಚಳಕ್ಕೂ ನಂಟಿರುವುದನ್ನು ನಮ್ಮ ಸಂಶೋಧನೆಯು ಪತ್ತೆಹಚ್ಚಿದೆ. ಜಾಗತಿಕ ಹವಾಮಾನದ ಮೇಲೆ ಪ್ರಭಾವ ಬೀರುವ ದೂರದ ಪ್ರದೇಶಗಳನ್ನು ಸಂಪರ್ಕಿಸುವ ಪಾರಿಸಾರಿಕ ಅಲೆಗಳು ಸೇರಿದಂತೆ ವಾತಾವರಣದ ಪ್ರಸರಣ ನಮೂನೆಗಳಲ್ಲಿ ಉಂಟಾಗುವ ಬದಲಾವಣೆಗಳೇ ಇದಕ್ಕೆ ಕಾರಣ. ಇದಕ್ಕೆ ವ್ಯತಿರಿಕ್ತವಾಗಿ ಆರ್ಕ್ಟಿಕ್ ಪ್ರದೇಶದಲ್ಲಿ ಕಡಿಮೆ ಪ್ರಮಾಣದಲ್ಲಿ ಸಮುದ್ರ ಹಿಮ ಸಂಗ್ರಹವಾಗುತ್ತಿರುವುದು ಕಂಡುಬಂದಿದೆ. ಇದರಿಂದಾಗಿ ಮುಂಗಾರು ಮಳೆಯ ಆರಂಭ ಹಾಗೂ ಆದರ ತೀವ್ರತೆಯ ಮೇಲೆ ಪರಿಣಾಮವುಂಟಾಗುತ್ತಿದೆ ಎಂದು ವರದಿ ತಿಇಸಿದೆ.
1979 ಹಾಗೂ 2021ರ ನಡುವೆ ಆರ್ಕಿಟಿಕ್ ಸಾಗರ ಪ್ರದೇಶದ ಹಿಮ ಹಾಗೂ ಭಾರತೀಯ ಮುಂಗಾರು ಮಳೆಯ ನಡುವಿನ ಸಂಬಂಧವನ್ನು ವಿಶ್ಲೇಷಿಸಲು ವಿಜ್ಞಾನಿಗಳು ಉಪಗ್ರಹಗಳ ಅವಲೋಕನ ಹಾಗೂ ಹವಾಮಾನ ಮಾದರಿಗಳನ್ನು ಈ ಅಧ್ಯಯನಕ್ಕೆ ಬಳಸಲಾಗಿತ್ತು.







