ನಾವು ಏನು ತಿನ್ನಬೇಕು ಎನ್ನುವುದು ನಮ್ಮ ಸ್ವಾತಂತ್ರ್ಯ; ವಿವಾದದ ಸ್ವರೂಪ ಪಡೆದ ಸ್ವಾತಂತ್ರ್ಯ ದಿನದಂದು ಮಾಂಸ ನಿಷೇಧ ಆದೇಶ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಆ.13: ಈ ವರ್ಷದ ಸ್ವಾತಂತ್ರ್ಯೋತ್ಸವ ದಿನದಂದು ಮಾಂಸದಂಗಡಿಗಳು ಮತ್ತು ಕಸಾಯಿಖಾನೆಗಳನ್ನು ಮುಚ್ಚುವಂತೆ ದೇಶದ ಅನೇಕ ಸ್ಥಳೀಯ ಪೌರ ಸಂಸ್ಥೆಗಳು ಆದೇಶಿಸಿರುವುದು ಭಾರೀ ರಾಜಕೀಯ ವಿವಾದವನ್ನು ಸೃಷ್ಟಿಸಿದೆ. ಪಕ್ಷಭೇದವನ್ನು ಮೀರಿ ಹಲವಾರು ರಾಜಕಾರಣಿಗಳು ನಿಷೇಧವನ್ನು ಜನರ ಆಹಾರ ಪದ್ಧತಿಯ ಮೇಲಿನ ದಾಳಿಯಾಗಿದೆ ಎಂದು ಬಣ್ಣಿಸಿದ್ದು, ದೇಶವು ಸ್ವಾತಂತ್ರ್ಯವನ್ನು ಆಚರಿಸುತ್ತಿರುವಾಗ ಜನರ ಸ್ವಾತಂತ್ರ್ಯವನ್ನು ಉಲ್ಲಂಘಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಆ.15ರಂದು ಸ್ವಾತಂತ್ರ್ಯದಿನ ಮತ್ತು ಆ.16ರಂದು ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಕಸಾಯಿಖಾನೆಗಳು ಮತ್ತು ಮಾಂಸದಂಗಡಿಗಳನ್ನು ಮುಚ್ಚುವಂತೆ ಬೃಹತ್ ಹೈದರಾಬಾದ್ ಮಹಾನಗರ ಪಾಲಿಕೆ(ಜಿಎಚ್ಎಂಸಿ)ಯ ಆದೇಶವನ್ನು ಖಂಡಿಸಿರುವ ಹೈದರಾಬಾದ್ ಸಂಸದ ಹಾಗೂ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಅವರು, ಆ.15ರಂದು ಕಸಾಯಿಖಾನೆಗಳು ಮತ್ತು ಮಾಂಸದಂಗಡಿಗಳನ್ನು ಮುಚ್ಚುವಂತೆ ದೇಶಾದ್ಯಂತ ಹಲವಾರು ಮಹಾನಗರ ಪಾಲಿಕೆಗಳು ಆದೇಶಿರುವಂತೆ ತೋರುತ್ತಿದೆ. ದುರದೃಷ್ಟವಶಾತ್ ಜಿಎಚ್ಎಂಸಿ ಕೂಡ ಇಂತಹುದೇ ಆದೇಶವನ್ನು ಹೊರಡಿಸಿದೆ. ಇದು ಕಠೋರ ಮತ್ತು ಅಂಸಾವಿಧಾನಿಕ ನಿರ್ಧಾರವಾಗಿದೆ. ಮಾಂಸ ಸೇವನೆಗೂ ಸ್ವಾತಂತ್ರ್ಯ ದಿನಾಚರಣೆಗೂ ಏನು ಸಂಬಂಧ? ತೆಲಂಗಾಣದ ಶೇ.99ರಷ್ಟು ಜನರು ಮಾಂಸವನ್ನು ತಿನ್ನುತ್ತಾರೆ. ಈ ಮಾಂಸ ನಿಷೇಧಗಳು ಜನರ ಸ್ವಾತಂತ್ರ್ಯ, ಖಾಸಗಿತನ, ಜೀವನೋಪಾಯ, ಸಂಸ್ಕೃತಿ, ಪೋಷಣೆ ಮತ್ತು ಧರ್ಮದ ಹಕ್ಕನ್ನು ಉಲ್ಲಂಘಿಸುತ್ತವೆ ಎಂದು ಕಿಡಿಕಾರಿದ್ದಾರೆ.
ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಹೊರಡಿಸಲಾಗಿರುವ ಇಂತಹುದೇ ಆದೇಶವನ್ನು ಆಕ್ಷೇಪಿಸಿರುವ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು, ಇಂತಹ ನಿಷೇಧವನ್ನು ಹೇರುವುದು ತಪ್ಪು. ಪ್ರಮುಖ ನಗರಗಳಲ್ಲಿ ವಿವಿಧ ಜಾತಿಗಳು ಮತ್ತು ಧರ್ಮಗಳ ಜನರು ವಾಸಿಸುತ್ತಾರೆ. ಇದು ಭಾವನಾತ್ಮಕ ವಿಷಯವಾಗಿದ್ದರೆ ಜನರು ಇದನ್ನು ಒಂದು ದಿನದ ಮಟ್ಟಿಗೆ ಸ್ವೀಕರಿಸುತ್ತಾರೆ. ಆದರೆ ಮಹಾರಾಷ್ಟ್ರ ದಿನ, ಸ್ವಾತಂತ್ರ್ಯದಿನ ಮತ್ತು ಗಣರಾಜ್ಯೋತ್ಸವ ದಿನಗಳಂದು ನೀವು ಇಂತಹ ನಿಷೇಧಗಳನ್ನು ಹೇರಿದರೆ ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ.
ಥಾಣೆ ಜಿಲ್ಲೆಯ ಕಲ್ಯಾಣ ಡೊಂಬಿವಲಿ ಮಹಾ ನಗರಪಾಲಿಕೆಯೂ ಇಂತಹುದೇ ಆದೇಶವನ್ನು ಹೊರಡಿಸಿದೆ. ಇದನ್ನು ಖಂಡಿಸಿರುವ ಶಿವಸೇನೆ(ಯುಬಿಟಿ) ನಾಯಕ ಆದಿತ್ಯ ಠಾಕ್ರೆಯವರು ಮಹಾನಗರ ಪಾಲಿಕೆ ಆಯುಕ್ತರನ್ನು ಅಮಾನತುಗೊಳಿಸಬೇಕು. ಯಾರು ಏನು ತಿನ್ನಬೇಕು ಎನ್ನುವುದನ್ನು ನಿರ್ಧರಿಸುವುದು ಅವರ ಕೆಲಸವಲ್ಲ ಎಂದಿದ್ದಾರೆ.
‘ಸ್ವಾತಂತ್ರ್ಯದಿನದಂದು ನಾವು ಏನು ತಿನ್ನುತ್ತೇವೆ ಎನ್ನುವುದು ನಮ್ಮ ಸ್ವಾತಂತ್ರ್ಯವಾಗಿದೆ. ನಾವು ಏನು ತಿನ್ನಬೇಕು ಎಂದು ಅವರು ಹೇಳುವಂತಿಲ್ಲ. ನಮ್ಮ ಮನೆಯಲ್ಲಿ, ನವರಾತ್ರಿಯ ದಿನಗಳಲ್ಲೂ ಸಿಗಡಿಗಳು ಮತ್ತು ಮೀನು ನಮ್ಮ ಪ್ರಸಾದವಾಗಿರುತ್ತವೆ. ಏಕೆಂದರೆ ಅದು ನಮ್ಮ ಸಂಪ್ರದಾಯ. ಇದು ನಮ್ಮ ಹಿಂದುತ್ವ. ನೀವು ನಮ್ಮ ಮನೆಗಳಿಗೇಕೆ ನುಗ್ಗುತ್ತೀರಿ? ರಸ್ತೆಗಳಲ್ಲಿ ಹೊಂಡ -ಗುಂಡಿಗಳಂತಹ ಸಮಸ್ಯೆಗಳ ಬಗ್ಗೆ ಮಹಾನಗರ ಪಾಲಿಕೆಯು ಗಮನ ಹರಿಸಬೇಕು ’ಎಂದಿದ್ದಾರೆ.
ಮಹಾರಾಷ್ಟ್ರದ ಬಿಜೆಪಿ-ಸೇನೆ-ಎನ್ಸಿಪಿ ಸರಕಾರವು ಮಾಂಸ ನಿಷೇಧವನ್ನು ಅನುಮೋದಿಸಿಲ್ಲ. ಪ್ರತಿಪಕ್ಷವು ಸರಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸುತ್ತಿದೆ ಮತ್ತು ಅದರ ಹೆಸರು ಕೆಡಿಸಲು ಪ್ರಯತ್ನಿಸುತ್ತಿದೆ ಎಂದು ಏಕನಾಥ ಶಿಂಧೆ ನೇತೃತ್ವದ ಶಿವಸೇನೆಯ ವಕ್ತಾರ ಅರುಣ್ ಸಾವಂತ್ ಹೇಳಿದರು.







