ಭಾರತದ ಶೇ.60ರಷ್ಟು ಆಸ್ತಿಗಳು ಶೇ.1ರಷ್ಟು ಅಗ್ರ ಶ್ರೀಮಂತರ ಬಳಿಯಿದೆ: ಬರ್ನ್ಸ್ಟೈನ್ ವರದಿ
“ರಿಯಲ್ ಎಸ್ಟೇಟ್ ಮತ್ತು ಚಿನ್ನಕ್ಕೆ ಹೆಚ್ಚು ಆದ್ಯತೆ”

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಆ.4: ಖಾಸಗಿ ಹಣಕಾಸು ನಿರ್ವಹಣೆ ಸಂಸ್ಥೆ ಬರ್ನ್ಸ್ಟೈನ್ ನ ನೂತನ ವರದಿಯಂತೆ ಭಾರತದ ಶ್ರೀಮಂತ ಪ್ರಜೆಗಳ ಸುಮಾರು ಶೇ.60ರಷ್ಟು ಹೂಡಿಕೆಗಳು ರಿಯಲ್ ಎಸ್ಟೇಟ್ ಮತ್ತು ಚಿನ್ನದಲ್ಲಿವೆ. ಅತ್ಯಂತ ಶ್ರೀಮಂತರನ್ನು ಒಳಗೊಂಡಿರುವ ಈ ಗುಂಪನ್ನು ವರದಿಯು ‘ಉಬರ್ ರಿಚ್’ ಎಂದು ಉಲ್ಲೇಖಿಸಿದೆ. ಸರಳವಾಗಿ ‘ಕುಬೇರರು’ ಎಂದು ಹೇಳಬಹುದಾದ ಈ ಗುಂಪು ಅತಿ ಹೆಚ್ಚು ನಿವ್ವಳ ಮೌಲ್ಯದ ವ್ಯಕ್ತಿಗಳು(ಯುಎಚ್ಎನ್ಐ),ಹೆಚ್ಚು ನಿವ್ವಳ ಮೌಲ್ಯದ ವ್ಯಕ್ತಿಗಳು(ಎಚ್ಎನ್ಐ) ಮತ್ತು ಶ್ರೀಮಂತ ವರ್ಗವನ್ನು ಒಳಗೊಂಡಿದೆ.
ಒಟ್ಟಾರೆಯಾಗಿ,ಈ ಹೆಚ್ಚಿನ ಆದಾಯದ ಗುಂಪುಗಳು ಭಾರತೀಯ ಕುಟುಂಬಗಳ ಕೇವಲ ಶೇ.1ರಷ್ಟನ್ನು ಪ್ರತಿನಿಧಿಸುತ್ತವೆ. ಆದರೆ ದೇಶದ ಒಟ್ಟು ಆಸ್ತಿಗಳ ಸುಮಾರು ಶೇ.60ರಷ್ಟನ್ನು ಮತ್ತು ಅದರ ಹಣಕಾಸು ಆಸ್ತಿಗಳ ಶೇ.70ರಷ್ಟನ್ನು ನಿಯಂತ್ರಿಸುತ್ತಿವೆ ಎಂದು ವರದಿಯು ತಿಳಿಸಿದೆ.
ಭಾರತದ ಒಟ್ಟು ಕುಟುಂಬಗಳ ಸಂಪತ್ತು 19.6 ಲಕ್ಷ ಕೋಟಿ ಡಾಲರ್ ಎಂದು ಅಂದಾಜಿಸಲಾಗಿದ್ದು, ಇದರಲ್ಲಿ 11.6 ಲಕ್ಷ ಕೋಟಿ ಡಾಲರ್ ಅಥವಾ ಶೇ.59ರಷ್ಟು ಈ ಕುಬೇರರ ಬಳಿಯಲ್ಲಿದೆ.
ಈ ಪೈಕಿ ಕೇವಲ 2.7 ಲಕ್ಷ ಕೋಟಿ ಡಾಲರ್ ಗಳನ್ನು ಮ್ಯೂಚ್ಯುವಲ್ ಫಂಡ್ಗಳು, ಶೇರುಗಳು, ವಿಮೆ ಮತ್ತು ಬ್ಯಾಂಕ್ ಅಥವಾ ಸರಕಾರಿ ಠೇವಣಿಗಳಂತಹ ಸಕ್ರಿಯವಾಗಿ ನಿರ್ವಹಿಸಬಹುದಾದ ಅಥವಾ ಮರುಹಂಚಿಕೆ ಮಾಡಬಹುದಾದ ಹಣಕಾಸು ಸ್ವತ್ತುಗಳಲ್ಲಿ ಹೂಡಿಕೆ ಮಾಡಲಾಗಿದೆ. ಉಳಿದ ಸುಮಾರು 8.9 ಲಕ್ಷ ಕೋಟಿ ಡಾಲರ್ ಗಳು ರಿಯಲ್ ಎಸ್ಟೇಟ್, ಚಿನ್ನ, ಪ್ರವರ್ತಕರ ಶೇರು ಬಂಡವಾಳ ಮತ್ತು ನಗದು ಹಿಡುವಳಿಗಳಂತಹ ಆಸ್ತಿಗಳಲ್ಲಿದೆ ಎಂದು ವರಿದಿಯು ತಿಳಿಸಿದೆ.
ಭಾರತದಲ್ಲಿ,ವಿಶೇಷವಾಗಿ ಶ್ರೀಮಂತ ವರ್ಗವು ಸಾಂಪ್ರದಾಯಿಕ ಹೂಡಿಕೆಗಳಿಂದ ಭಿನ್ನವಾಗಿ ಹೊಸ ಅವಕಾಶಗಳತ್ತ ನೋಡಲು ಆರಂಭಿಸಿರುವಾಗ ಸಂಪತ್ತು ವ್ಯವಸ್ಥಾಪಕರಿಗೆ ಮತ್ತು ಹೂಡಿಕೆ ಸಲಹೆಗಾರರಿಗೆ ಮಹತ್ವದ ವ್ಯವಹಾರ ಅವಕಾಶಗಳಿವೆ ಎಂದು ವರದಿಯು ಬೆಟ್ಟು ಮಾಡಿದೆ. ಈ ಶ್ರೀಮಂತರ ವರ್ಗವನ್ನು ಔಪಚಾರಿಕ ಸಂಪತ್ತು ನಿರ್ವಹಣೆ ಸೇವೆಗಳು ಹೆಚ್ಚಾಗಿ ತಲುಪಿಲ್ಲ ಮತ್ತು ಹಣಕಾಸು ಸಂಪತ್ತಿನ ಗಣನೀಯ ಭಾಗವು ನಿರ್ವಹಿಸಲ್ಪಡದೆ ಉಳಿದಿರುವುದನ್ನು ವರದಿಯು ಎತ್ತಿ ತೋರಿಸಿದೆ.
ಆದಾಯ ಸಮಾನತೆ ಹೆಚ್ಚಾಗಿದ್ದು, ಸಂಪತ್ತಿನ ಅಸಮಾನತೆ ಇನ್ನೂ ಹೆಚ್ಚಿರುವುದರಿಂದ ಭಾರತದಲ್ಲಿ ವ್ಯಾಪಕ ರಚನಾ ಪ್ರವೃತ್ತಿಯನ್ನು ವರದಿಯು ಒತ್ತಿ ಹೇಳಿದೆ.
ಶೇ.1ರಷ್ಟು ಅಗ್ರ ಶ್ರೀಮಂತರು ದೇಶದ ಒಟ್ಟು ಆದಾಯದಲ್ಲಿ ಶೇ.40ರಷ್ಟು ಪಾಲನ್ನು ಹೊಂದಿದ್ದಾರೆ ಮತ್ತು ‘ಶೇಷ ಭಾರತ’ವು ಆದಾಯ ಮತ್ತು ಆಸ್ತಿಗಳೆರಡರಲ್ಲೂ ಸಣ್ಣ ಭಾಗವನ್ನು ಮಾತ್ರ ಹೊಂದಿದೆ ಎಂದು ವರದಿಯು ಹೇಳಿದೆ.







