ಅಪಘಾತಗಳನ್ನು ತಡೆಯಲು ಸಾಧ್ಯವಾಗದಿದ್ದರೆ ಸಚಿವಾಲಯಗಳು ಏಕೆ ಬೇಕು: ಅಮಿತ್ ಶಾ ಹೇಳಿಕೆಗೆ ಕಾಂಗ್ರೆಸ್ ಆಕ್ರೋಶ

ಅಮಿತ್ ಶಾ / ಜೈರಾಮ್ ರಮೇಶ್ (Photo credit: PTI)
ಹೊಸದಿಲ್ಲಿ: ʼಅಪಘಾತಗಳನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ್ದ ಹೇಳಿಕೆಗೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಅಪಘಾತಗಳನ್ನು ತಡೆಯಲು ಸಾಧ್ಯವಾಗದಿದ್ದರೆ ಸಚಿವಾಲಯಗಳು ಏಕೆ ಬೇಕು ಎಂದು ಪ್ರತಿಕ್ರಿಯೆ ನೀಡಿದೆ.
ಅಹಮದಾಬಾದ್ನಲ್ಲಿ ಗುರುವಾರ ನಡೆದ ಏರ್ ಇಂಡಿಯಾ ವಿಮಾನ ದುರಂತದ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ್ದ ಹೇಳಿಕೆಯು ವಿವಾದಕ್ಕೆ ಕಾರಣವಾಗಿತ್ತು.
"ದುರಂತದ ಮಯದಲ್ಲಿ ಕೇಂದ್ರ ಗೃಹ ಸಚಿವರು ನೀಡುವ ಹೇಳಿಕೆ ಇದೇನಾ? ಇದು ಅತ್ಯಂತ ಸಂವೇದನಾ ರಹಿತ ಹೇಳಿಕೆ", ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಹೇಳಿದ್ದಾರೆ.
ಎಐಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅವರೂ ಅಮಿತ್ ಶಾ ಹೇಳಿಕೆಯನ್ನು ಖಂಡಿಸಿದ್ದಾರೆ. 'ವಿಮಾನ ಅಪಘಾತದಲ್ಲಿ ಜನರು ಮೃತಪಟ್ಟಾಗ, ಈ ರೀತಿ ಉಪನ್ಯಾಸ ನೀಡುವ ಬದಲು ಗೃಹ ಸಚಿವರು ಕನಿಷ್ಠ ಜವಾಬ್ದಾರಿಯ ಮಾತುಗಳನ್ನು ಆಡಬೇಕಿತ್ತು' ಎಂದು ಅವರು ಹೇಳಿದ್ದಾರೆ.
'ಅಪಘಾತಗಳನ್ನು ತಡೆಯಲು ಸಾಧ್ಯವಾಗದಿದ್ದರೆ ನಮಗೆ ಸಚಿವಾಲಯಗಳು ಏಕೆ ಬೇಕು' ಎಂದು ಅವರೂ ಪ್ರಶ್ನಿಸಿದ್ದಾರೆ.
'ವಿಮಾನ ಅಪಘಾತಗಳು ದೈವದತ್ತವಾಗಿ ನಡೆಯುವುದಲ್ಲ. ಅವುಗಳನ್ನು ತಡೆಯಬಹುದು. ಅದಕ್ಕಾಗಿಯೇ ನಮ್ಮಲ್ಲಿ ವಾಯುಯಾನ ನಿಯಂತ್ರಣ, ಸುರಕ್ಷತಾ ಮಾರ್ಗಸೂಚಿ ವ್ಯವಸ್ಥೆಗಳಿವೆ' ಎಂದು ಉಲ್ಲೇಖಿಸಿದ್ದಾರೆ.
Is this what the Union Home Minister should be saying now? It is most insensitive. https://t.co/3PS3A2mUXy
— Jairam Ramesh (@Jairam_Ramesh) June 13, 2025







