ಮೊಟ್ಟೆ ಸೇವನೆಯಲ್ಲಿ ನೆರೆ ರಾಷ್ಟ್ರಗಳಿಗಿಂತ ಭಾರತ ಮುಂದೆ...ಆದರೆ?!

Image Source : Freepik
ಹೊಸದಿಲ್ಲಿ: "ಸಂಡೇ ಹೋ ಯಾ ಮಂಡೆ. ರೋಝ್ ಖಾವೋ ಅಂಡೆ" ಎಂಬ ಆಕರ್ಷಕ ಜಾಹೀರಾತಿನ ಸಾಲನ್ನು ನೀವು ಕೇಳಿರಬಹುದು; ಭಾರತೀಯ ಆಹಾರಪದ್ಧತಿಯಲ್ಲಿ ಮೊಟ್ಟೆಯನ್ನು ಉತ್ತೇಜಿಸುವ ಈ ಜಾಹೀರಾತು ಕೇಳಲು ಆಕರ್ಷಕ ಮಾತ್ರವಲ್ಲದೇ ಇದು ನಿಜಜೀವನದಲ್ಲಿ ಕಾರ್ಯರೂಪಕ್ಕೆ ಬಂದಿದೆ ಎನ್ನುವುದನ್ನು ಇತ್ತೀಚಿನ ಅಂಕಿ ಅಂಶಗಳು ದೃಢಪಡಿಸಿವೆ.
ದೇಶದಲ್ಲಿ 1961ರಿಂದ 2022ರವರೆಗೆ ಮೊಟ್ಟೆ ಸೇವನೆ ಪ್ರವೃತ್ತಿಯ ಅಂಕಿ ಅಂಶಗಳನ್ನು ವಿಶ್ಲೇಷಿಸಿದಾಗ ಕುತೂಹಲಕಾರಿ ಅಂಶಗಳು ಬೆಳಕಿಗೆ ಬಂದಿವೆ. 1961 ರಿಂದ 1976ರ ಅವಧಿಯಲ್ಲಿ ಭಾರತೀಯರ ಮೊಟ್ಟೆ ಸೇವನೆ ಪ್ರಮಾಣ ಪಾಕಿಸ್ತಾನಕ್ಕಿಂತ ಹೆಚ್ಚಾಗಿತ್ತು. 1977ರಲ್ಲಿ ಉಭಯ ದೇಶಗಳ ನಡುವೆ ನಿಕಟ ಪೈಪೋಟಿ ಇತ್ತು. ಮರುವರ್ಷ ಪಾಕಿಸ್ತಾನ, ಭಾರತವನ್ನು ಹಿಂದಿಕ್ಕಿ 2013ರವರೆಗೆ ಅಂದರೆ ಮೂರು ದಶಕಗಳ ಕಾಲ ಮುನ್ನಡೆ ಉಳಿಸಿಕೊಂಡಿತ್ತು.
2014 ರಿಂದ 17ರ ಅವಧಿಯಲ್ಲಿ ಉಭಯ ದೇಶಗಳಲ್ಲಿ ತಲಾ ಮೊಟ್ಟೆ ಸೇವನೆ ಸಮನಾಗಿತ್ತು. ಆದರೆ 2018ರಲ್ಲಿ ದೊಡ್ಡ ಬದಲಾವಣೆ ಕಂಡುಬಂದಿದ್ದು, ಭಾರತ ತನ್ನ ನೆರೆಯ ದೇಶವನ್ನು ಹಿಂದಿಕ್ಕಿ ನಿರಂತರವಾಗಿ ಮುನ್ನಡೆ ಉಳಿಸಿಕೊಂಡಿದೆ. 2022ರ ವೇಳೆಗೆ ಭಾರತದಲ್ಲಿ ವಾರ್ಷಿಕವಾಗಿ ಪ್ರತಿ ವ್ಯಕ್ತಿಯ ಮೊಟ್ಟೆ ಸೇವನೆ 4.6 ಕೆ.ಜಿ ಇದ್ದರೆ ಪಾಕಿಸ್ತಾನದಲ್ಲಿ ಈ ಪ್ರಮಾಣ 3.7 ಕೆಜಿಯಷ್ಟಿದೆ.
ಪಾಕಿಸ್ತಾನದ ವಿರುದ್ಧ ಮಾತ್ರವಲ್ಲದೇ ಇತರ ನೆರೆಯ ರಾಷ್ಟ್ರಗಳಾದ ಬಾಂಗ್ಲಾದೇಶ, ಶ್ರೀಲಂಕಾ ಮತ್ತು ನೇಪಾಳದ ವಿರುದ್ಧವೂ ಭಾರತ ಮೊಟ್ಟೆ ಸೇವನೆ ವಿಚಾರದಲ್ಲಿ ಮುಂದಿದೆ. ಬಾಂಗ್ಲಾದಲ್ಲಿ ವಾರ್ಷಿಕವಾಗಿ ಸರಾಸರಿ 3.6 ಕೆ.ಜಿ ಮೊಟ್ಟೆ ಸೇವನೆಯಾಗುತ್ತಿದ್ದರೆ, ಶ್ರೀಲಂಕಾದಲ್ಲಿ 3.7 ಕೆಜಿ, ನೇಫಾಳದಲ್ಲಿ 2 ಕೆ.ಜಿ ಮೊಟ್ಟೆ ಸೇವನೆಯಾಗುತ್ತಿದೆ.
ಹೆಚ್ಚುತ್ತಿರುವ ಆದಾಯ, ಉತ್ತಮ ಆಹಾರ ಲಭ್ಯತೆ, ಆಹಾರದಲ್ಲಿ ಪ್ರೊಟೀನ್ ಮಹತ್ವದ ಬಗ್ಗೆ ಹೆಚ್ಚುತ್ತಿರುವ ಜಾಗೃತಿ ಈ ಏರಿಕೆಗೆ ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಆದಾಗ್ಯೂ ಜಾಗತಿಕವಾಗಿ ಹೋಲಿಕೆ ಮಾಡಿದಾಗ ಚಿತ್ರಣ ಅಷ್ಟೊಂದು ಆಶಾದಾಯಕವಾಗಿಲ್ಲ.
ದಕ್ಷಿಣ ಏಷ್ಯಾದಲ್ಲಿ ಭಾರತ ಮೊಟ್ಟೆ ಸೇವನೆಯಲ್ಲಿ ಮುಂದಿದ್ದರೂ, ಭಾರತದಲ್ಲಿ ಸೇವನೆ ಪ್ರಮಾಣ ಜಾಗತಿಕ ಸರಾಸರಿಯ ಅರ್ಧದಷ್ಟು ಮಾತ್ರ ಇದೆ. 2022ರಲ್ಲಿ ಜಾಗತಿಕ ಮಟ್ಟದಲ್ಲಿ ಸರಾಸರಿ ಮೊಟ್ಟೆ ಸೇವನೆ ಪ್ರಮಾಣ 10.4 ಕೆಜಿ ಇದ್ದು, ಇದು ಭಾರತದ ಪ್ರಮಾಣ (4.6 ಕೆಜಿ)ದ ಎರಡು ಪಟ್ಟಿಗಿಂತಲೂ ಅಧಿಕ. ಇದು ಜಾಗತಿಕ ಪೌಷ್ಟಿಕ ಮಾನದಂಡಗಳಲ್ಲಿ ಭಾರತ ಇನ್ನೂ ಸಾಕಷ್ಟು ಹಿಂದಿದೆ ಎನ್ನುವುದನ್ನು ಈ ಅಂಕಿ ಅಂಶ ಸ್ಪಷ್ಟಪಡಿಸುತ್ತದೆ.
ಭಾರತದ ಅಂಕಿ ಅಂಶಗಳ ಸಚಿವಾಲಯದ ಪ್ರಕಾರ ಭಾರತೀಯರು ಪ್ರತಿ ತಿಂಗಳು ನಗರ ಪ್ರದೇಶದಲ್ಲಿ ಆಹಾರಕ್ಕೆ 2776 ರೂಪಾಯಿ ವೆಚ್ಚ ಮಾಡಿದರೆ, ಗ್ರಾಮೀಣ ಪ್ರದೇಶದಲ್ಲಿ 1939 ರೂಪಾಯಿ ವೆಚ್ಚ ಮಾಡುತ್ತಾರೆ. ಗ್ರಾಮೀಣ ಕುಟುಂಬಗಳ ಒಟ್ಟು ವೆಚ್ಚದಲ್ಲಿ ಆಹಾರಕ್ಕೆ ಶೇಕಡ 47ರಷ್ಟು ವೆಚ್ಚವಾದರೆ, ನಗರ ಕುಟುಂಬಗಳಲ್ಲಿ ಈ ಪ್ರಮಾಣ ಶೇಕಡ 40ರಷ್ಟಿದೆ. ಅಚ್ಚರಿಯ ವಿಷಯವೆಂದರೆ ಆಹಾರ ವೆಚ್ಚದಲ್ಲಿ ಹೆಚ್ಚಿನ ಪ್ರಮಾಣ ಖರ್ಚಾಗುತ್ತಿರುವುದು ಪಾನೀಯ, ತಿಂಡಿತಿನಸು ಮತ್ತು ಸಂಸ್ಕರಿತ ಆಹಾರಗಳಿಗೆ. ಪಾನೀಯ, ಚಿಪ್ಸ್ ಮತ್ತು ಸಿದ್ಧ ಆಹಾರಗಳಿಗೆ ಗ್ರಾಮೀಣ ಜನತೆ ತಮ್ಮ ಒಟ್ಟು ವೆಚ್ಚದ ಶೇಕಡ 9.8ನ್ನು ವ್ಯಯಿಸಿದರೆ, ನಗರದ ಜನ ಇದಕ್ಕೆ ಶೇಕಡ 11.1ರಷ್ಟು ವೆಚ್ಚ ಮಾಡುತ್ತಾರೆ. ಹಾಲು ಮತ್ತು ಹೈನು ಉತ್ಪನ್ನಗಳು ನಂತರದ ಸ್ಥಾನದಲ್ಲಿವೆ.
ಸಾಂದರ್ಭಿಕ ಚಿತ್ರ







