ಇಂಡಿಯಾ ಮೈತ್ರಿಕೂಟ ಅಸ್ತಿತ್ವದಲ್ಲಿಲ್ಲ: ಪ್ರಕಾಶ್ ಅಂಬೇಡ್ಕರ್ ಸ್ಫೋಟಕ ಹೇಳಿಕೆ

Photo : Facebook/@PrakashAmbedkar.Official
ಮುಂಬೈ: “ನನ್ನ ಪ್ರಕಾರ, ಇಂಡಿಯಾ ಮೈತ್ರಿಕೂಟ ಇನ್ನು ಅಸ್ತಿತ್ವದಲ್ಲಿಲ್ಲ. ಉತ್ತರ ಪ್ರದೇಶದಲ್ಲಿ ಸ್ಥಾನ ಹಂಚಿಕೆಯ ಕುರಿತು ಒಮ್ಮತ ಮೂಡದ ಕಾರಣ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸುತ್ತಿವೆ. ಹಾಗೆಯೇ ಇತರರೂ ಪ್ರತ್ಯೇಕವಾಗಿ ಸ್ಪರ್ಧಿಸುತ್ತಿದ್ದಾರೆ” ಎಂದು ಮಹಾ ವಿಕಾಸ್ ಅಘಾಡಿ ಸಭೆಯಲ್ಲಿ ಭಾಗವಹಿಸಿದ್ದ ವಂಚಿತ್ ಬಹುಜನ್ ಅಘಾಡಿಯ ಮುಖ್ಯಸ್ಥ ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ ಎಂದು deccanherald.com ವರದಿ ಮಾಡಿದೆ.
ಮಹಾ ವಿಕಾಸ್ ಅಘಾಡಿ ಸಭೆಯಲ್ಲಿ ತನ್ನ ಕಾರ್ಯಸೂಚಿಯನ್ನು ಮಂಡಿಸಿದ ವಂಚಿತ್ ಬಹುಜನ್ ಅಘಾಡಿಯು, “ಸಾಮಾನ್ಯ ಕಾರ್ಯಕ್ರಮಗಳ ಕುರಿತ ಒಮ್ಮತ ಮಾತ್ರ ವಿರೋಧ ಪಕ್ಷಗಳ ಮೈತ್ರಿಕೂಟದ ರಚನೆಗೆ ನೆರವಾಗಲಿದೆ. ಇಂಡಿಯಾ ಮೈತ್ರಿಕೂಟ ಇನ್ನು ಅಸ್ತಿತ್ವದಲ್ಲಿಲ್ಲ. ಮಹಾ ವಿಕಾಸ್ ಅಘಾಡಿಗೂ ಆ ಪರಿಸ್ಥಿತಿ ಬಾರದಂತೆ ನಾವು ಖಾತರಿಪಡಿಸಲಿದ್ದೇವೆ” ಎಂದು ಪ್ರತಿಪಾದಿಸಿತು.
ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಬಾಬಾಸಾಹೇಬ್ ಥೋರಟ್ ಹಾಗೂ ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಚೌಹಾಣ್, ಮುಂಬೈ ಕಾಂಗ್ರೆಸ್ ಅಧ್ಯಕ್ಷ ಪ್ರೊ. ವರ್ಷ ಗಾಯಕ್ವಾಡ್, ಶರದ್ ಪವಾರ್ ನೇತೃತ್ವದ ಎನ್ಸಿಪಿಯ ರಾಜ್ಯ ಘಟಕದ ಅಧ್ಯಕ್ಷ ಜಯಂತ್ ಪಾಟೀಲ್, ಎನ್ಸಿಪಿ ಗುಂಪಿನ ನಾಯಕ ಡಾ. ಜಿತೇಂದ್ರ ಅವ್ಹಾದ್ ಹಾಗೂ ಶಿವಸೇನೆ(ಉದ್ಧವ್ ಠಾಕ್ರೆ ಬಣ)ಯ ನಾಯಕ ಸಂಜಯ್ ರಾವತ್ ಪ್ರಕಾಶ್ ಅಂಬೇಡ್ಕರ್ ಅವರನ್ನು ಸಭೆಗೆ ಸ್ವಾಗತಿಸಿದರು.
ಉತ್ತರ ಪ್ರದೇಶದ 80 ಸ್ಥಾನಗಳ ನಂತರ 48 ಸ್ಥಾನಗಳನ್ನು ಹೊಂದಿರುವ ಮಹಾರಾಷ್ಟ್ರ ರಾಜ್ಯ ಅತಿ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಎರಡನೆಯ ರಾಜ್ಯವಾಗಿದೆ. ಮಹಾ ವಿಕಾಸ್ ಅಘಾಡಿಯ ಮೈತ್ರಿ ಪಕ್ಷಗಳು ಸರ್ವಾನುಮತದಿಂದ ಸ್ಥಾನ ಹಂಚಿಕೆಯ ಒಪ್ಪಂದವನ್ನು ಅಂತಿಮಗೊಳಿಸಿದ್ದರೂ, ಇನ್ನೂ 10-12 ಸ್ಥಾ ನಗಳ ಹಂಚಿಕೆ ಕುರಿತ ಮಾತುಕತೆ ಪ್ರಗತಿಯಲ್ಲಿದೆ.
“ಮಹಾ ವಿಕಾಸ್ ಅಘಾಡಿಯನ್ನು ವಂಚಿತ್ ಬಹುಜನ್ ಅಘಾಡಿ ಸೇರ್ಪಡೆಯಾಗಿರುವುದರಿಂದ ಭಾರತದ ಸಂವಿಧಾನವನ್ನು ರಕ್ಷಿಸುವ ಹೋರಾಟವು ಮತ್ತಷ್ಟು ಬಲಿಷ್ಠವಾಗಿದೆ. ನಾವು ನಿರಂಕುಶಾಧಿಕಾರದ ವಿರುದ್ಧ ಹೋರಾಡಲಿದ್ದೇವೆ” ಎಂದು ಶಿವಸೇನೆ(ಉದ್ಧವ್ ಠಾಕ್ರೆ ಬಣ)ಯ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ನಿಕಟವರ್ತಿ ಸಂಜಯ್ ರಾವತ್ ಘೋಷಿಸಿದ್ದಾರೆ.







