ಇಂಡಿಯಾ ಮೈತ್ರಿಕೂಟವು ಹಳಿತಪ್ಪಿರುವಂತೆ ಕಂಡು ಬರುತ್ತಿದೆ: ಪಿ. ಚಿದಂಬರಂ
ವಿರೋಧ ಪಕ್ಷದ ಒಕ್ಕೂಟದ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕ

ಪಿ ಚಿದಂಬರಂ (Photo credit: PTI)
ಹೊಸದಿಲ್ಲಿ: ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟವು ಹಳಿತಪ್ಪಿರುವಂತೆ ಕಂಡು ಬರುತ್ತಿದೆ. ಅವುಗಳ ಮಧ್ಯೆ ಒಗ್ಗಟ್ಟಿರುವ ಬಗ್ಗೆ ಖಚಿತ ಮಾಹಿತಿ ಇಲ್ಲ ಎಂದು ಹಿರಿಯ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಪಿ ಚಿದಂಬರಂ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಸಲ್ಮಾನ್ ಖುರ್ಷಿದ್ ಮತ್ತು ಮೃತ್ಯುಂಜಯ್ ಸಿಂಗ್ ಯಾದವ್ ಅವರ "ಕಂಟೆಸ್ಟಿಂಗ್ ಡೆಮಾಕ್ರಟಿಕ್ ಡಿಫಿಸಿಟ್" ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಚಿದಂಬರಂ ಅವರು ಈ ಹೇಳಿಕೆ ನೀಡಿದ್ದಾರೆ.
"ಮೃತ್ಯುಂಜಯ್ ಸಿಂಗ್ ಯಾದವ್ ಹೇಳಿದಂತೆ ಇಂಡಿಯಾ ಒಕ್ಕೂಟದ ಭವಿಷ್ಯವು ಅಷ್ಟೊಂದು ಉಜ್ವಲವಾಗಿಲ್ಲ. ಮೈತ್ರಿಕೂಟದಲ್ಲಿ ಇನ್ನೂ ಒಗ್ಗಟ್ಟು ಇದೆ ಎಂದು ಅವರು ಭಾವಿಸುತ್ತಿರುವಂತೆ ತೋರುತ್ತದೆ. ಆದರೆ ಆ ಬಗ್ಗೆ ನನಗೆ ಖಚಿತತೆ ಇಲ್ಲ. ಈ ಬಗ್ಗೆ ಸಲ್ಮಾನ್ ಖುರ್ಷಿದ್ ಅವರು ಮಾತ್ರ ಉತ್ತರಿಸಬಹುದು. ಏಕೆಂದರೆ ಸಲ್ಮಾನ್ ಅವರು ಇಂಡಿಯಾ ಒಕ್ಕೂಟದ ಮಾತುಕತೆ ನಡೆಸಿದ ತಂಡದ ಭಾಗವಾಗಿದ್ದರು. ಮೈತ್ರಿಕೂಟ ಸಂಪೂರ್ಣವಾಗಿ ಒಗ್ಗಟ್ಟಿನಿಂದ ಇದ್ದರೆ, ನಾನು ತುಂಬಾ ಸಂತೋಷಪಡುತ್ತೇನೆ. ಆದರೆ ಅಲ್ಲಿ ಒಗ್ಗಟ್ಟು ಇಲ್ಲ ಎಂಬುದು ಕ್ಷಣಾರ್ಧದಲ್ಲಿ ತಿಳಿದು ಬರುತ್ತದೆ" ಎಂದು ರಾಜ್ಯಸಭಾ ಸಂಸದ ಚಿದಂಬರಂ ಹೇಳಿದರು.
ಮೈತ್ರಿಕೂಟವನ್ನು ಒಟ್ಟಿಗೆ ಸೇರಿಸಬಹುದು, ಇನ್ನೂ ಅದಕ್ಕೆ ಸಮಯವಿದೆ. ಇಂಡಿಯಾ ಒಕ್ಕೂಟವು ಅಸಾಧಾರಣ ವ್ಯವಸ್ಥೆಯೊಂದರ ವಿರುದ್ಧ ಹೋರಾಡುತ್ತಿದೆ. ಅದನ್ನು ಎದುರಿಸಲು ಎಲ್ಲಾ ರಂಗಗಳಲ್ಲಿಯೂ ಹೋರಾಡಬೇಕು ಎಂದು ಕೇಂದ್ರದ ಮಾಜಿ ಹಣಕಾಸು ಸಚಿವರೂ ಆದ ಪಿ. ಚಿದಂಬರಂ ಎಚ್ಚರಿಸಿದರು.
"ನನ್ನ ಅನುಭವ ಮತ್ತು ನಾನು ಓದಿದ ಇತಿಹಾಸದಲ್ಲಿ ಬಿಜೆಪಿಯಷ್ಟು ಬಲಿಷ್ಠವಾಗಿ ಸಂಘಟಿತವಾದ ರಾಜಕೀಯ ಪಕ್ಷ ಇನ್ನೊಂದಿಲ್ಲ. ಇದು ಕೇವಲ ರಾಜಕೀಯ ಪಕ್ಷವಲ್ಲ. ಇದು ಒಂದು ಬಲಿಷ್ಠ ಯಂತ್ರದ ಹಿಂದಿರುವ ಯಂತ್ರ. ಎರಡು ಯಂತ್ರಗಳು ಸೇರಿಕೊಂಡು ಭಾರತದ ಎಲ್ಲಾ ವ್ಯವಸ್ಥೆಗಳನ್ನು ನಿಯಂತ್ರಿಸುತ್ತಿದೆ", ಎಂದು ಕಳವಳ ವ್ಯಕ್ತಪಡಿಸಿದರು.
"ಚುನಾವಣಾ ಆಯೋಗದಿಂದ ಹಿಡಿದು ದೇಶದ ಅತ್ಯಂತ ಕೆಳಮಟ್ಟದ ಪೊಲೀಸ್ ಠಾಣೆಯವರೆಗೆ, ಬಿಜೆಪಿ ನಿಯಂತ್ರಿಸುತ್ತಿದೆ. ಈ ಸಂಸ್ಥೆಗಳನ್ನು ನಿಯಂತ್ರಿಸಲು ಮತ್ತು ಕೆಲವೊಮ್ಮೆ ವಶಪಡಿಸಿಕೊಳ್ಳಲು ಪಕ್ಷವು ಸಮರ್ಥವಾಗಿದೆ", ಎಂದು ಪಿ. ಚಿದಂಬರಂ ಹೇಳಿದ್ದಾರೆ.







