ಸಾಮೂಹಿಕ ಹಿಂಸಾಚಾರಗಳ ಅಪಾಯದಲ್ಲಿರುವ ಪ್ರಮುಖ ರಾಷ್ಟ್ರಗಳಲ್ಲಿ ಭಾರತ: ಹೊಲೋಕಾಸ್ಟ್ ಮ್ಯೂಸಿಯಂ ಎಚ್ಚರಿಕೆ

image credit: gemini
ಹೊಸದಿಲ್ಲಿ, ಜ.11: ಅಮೆರಿಕದ ಹೊಲೋಕಾಸ್ಟ್ ಮೆಮೋರಿಯಲ್ ಮ್ಯೂಸಿಯಂ ಪ್ರಕಟಿಸಿರುವ ವಾರ್ಷಿಕ ಜಾಗತಿಕ ಅಧ್ಯಯನ ವರದಿಯ ಪ್ರಕಾರ, ಭಾರತವು ಮುಂದಿನ ಎರಡು ವರ್ಷಗಳಲ್ಲಿ ನಾಗರಿಕರ ವಿರುದ್ಧ ಸಾಮೂಹಿಕ ಹಿಂಸಾಚಾರ ಮತ್ತು ಜನಾಂಗೀಯ ದೌರ್ಜನ್ಯಗಳ ಗಂಭೀರ ಅಪಾಯಕ್ಕೆ ಸಿಲುಕಬಹುದು.
ರಾಜ್ಯಗಳಲ್ಲಿ ಸಾಮೂಹಿಕ ಹತ್ಯೆಗಳು ನಡೆಯುವ ಸಾಧ್ಯತೆಯಿರುವ 168 ದೇಶಗಳ ಪಟ್ಟಿಯಲ್ಲಿ ಭಾರತವು ನಾಲ್ಕನೇ ಸ್ಥಾನದಲ್ಲಿದೆ. ಗಮನಾರ್ಹವಾಗಿ, ಪ್ರಸಕ್ತ ಭಾರೀ ಪ್ರಮಾಣದ ಹಿಂಸಾಚಾರವನ್ನು ಎದುರಿಸದಿದ್ದರೂ, ಅಂತಹ ಅಪಾಯವನ್ನು ಎದುರಿಸುತ್ತಿರುವ ದೇಶಗಳ ಪೈಕಿ ಭಾರತವು ಅಗ್ರಸ್ಥಾನದಲ್ಲಿದೆ ಎಂದು ವರದಿಯು ಹೇಳಿದೆ.
ವರದಿಯು ಭಾರತದಲ್ಲಿ ಈಗಲೇ ಸಾಮೂಹಿಕ ಹತ್ಯೆಗಳು ನಡೆಯುತ್ತಿವೆ ಎಂದು ಹೇಳಿಲ್ಲ. ಆದರೆ ಅಪಾಯದ ಲಕ್ಷಣಗಳು ಗೋಚರಿಸುತ್ತಿವೆ ಮತ್ತು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಪರಿಸ್ಥಿತಿ ಗಂಭೀರವಾಗಬಹುದು ಎಂದು ಎಚ್ಚರಿಕೆ ನೀಡಿದೆ.
ಮ್ಯೂಸಿಯಂನ ಅರ್ಲಿ ವಾರ್ನಿಂಗ್ ಪ್ರಾಜೆಕ್ಟ್ ಸಿದ್ಧಪಡಿಸಿರುವ ಡಿಸೆಂಬರ್ 2025ರ ವರದಿಯು, ಭಾರತವು 2026ರ ಅಂತ್ಯಕ್ಕೆ ಮುನ್ನ ನಾಗರಿಕರ ವಿರುದ್ಧ ಉದ್ದೇಶಪೂರ್ವಕ ಸಾಮೂಹಿಕ ಹಿಂಸಾಚಾರಕ್ಕೆ ಸಾಕ್ಷಿಯಾಗುವ ಸಾಧ್ಯತೆ ಶೇ.7.5ರಷ್ಟಿದೆ ಎಂದು ಹೇಳಿದೆ. ಸಶಸ್ತ್ರ ಗುಂಪುಗಳು ಒಂದು ವರ್ಷದೊಳಗೆ ಕನಿಷ್ಠ 1,000 ನಾಗರಿಕರನ್ನು ಅವರ ಜನಾಂಗೀಯತೆ, ಧರ್ಮ, ರಾಜಕೀಯ ಅಥವಾ ಭೌಗೋಳಿಕತೆಯ ಆಧಾರದ ಮೇಲೆ ಕೊಲ್ಲಬಹುದು ಎಂದು ವರದಿಯು ತಿಳಿಸಿದೆ.
ಪಟ್ಟಿಯಲ್ಲಿ ಮೂರು ದೇಶಗಳು ಭಾರತಕ್ಕಿಂತ ಮೇಲಿನ ಸ್ಥಾನಗಳಲ್ಲಿದೆ. ಮ್ಯಾನ್ಮಾರ್ ಅಗ್ರಸ್ಥಾನದಲ್ಲಿದ್ದರೆ, ಚಾಡ್ ಮತ್ತು ಸುಡಾನ್ ನಂತರದ ಸ್ಥಾನಗಳಲ್ಲಿವೆ. ಮ್ಯಾನ್ಮಾರ್ ಮತ್ತು ಸುಡಾನ್ ಸೇರಿದಂತೆ ಪಟ್ಟಿಯಲ್ಲಿನ ಹಲವಾರು ಅಗ್ರ ದೇಶಗಳಲ್ಲಿ ಈಗಾಗಲೇ ಸಾಮೂಹಿಕ ಹತ್ಯೆಗಳು ನಡೆಯುತ್ತಿದ್ದು, ಇಂತಹ ಅಪಾಯವನ್ನು ಎದುರಿಸಬಹುದಾದ ದೇಶವಾಗಿ ಭಾರತದ ಸ್ಥಾನವನ್ನು ಇದು ಗಮನಾರ್ಹವಾಗಿಸುತ್ತದೆ.
ಮ್ಯೂಸಿಯಂ ಮತ್ತು ಡಾರ್ಟ್ಮೌತ್ ಕಾಲೇಜಿನ ಸಂಶೋಧಕರು ಹಿಂಸಾಚಾರದ ಮಾದರಿಗಳನ್ನು ಗುರುತಿಸಲು ದಶಕಗಳ ಐತಿಹಾಸಿಕ ದತ್ತಾಂಶಗಳನ್ನು ವಿಶ್ಲೇಷಿಸಿದ್ದಾರೆ. ಅವರು ಹಿಂದಿನ ವರ್ಷಗಳಲ್ಲಿ ಸಾಮೂಹಿಕ ಹಿಂಸಾಚಾರ ಭುಗಿಲೆದ್ದಿದ್ದ ದೇಶಗಳಲ್ಲಿ ಸಮಾನವಾಗಿದ್ದ ಗುಣಲಕ್ಷಣಗಳನ್ನು ಪರಿಶೀಲಿಸಿದ ಬಳಿಕ, ಇಂದಿನ ದಿನಗಳಲ್ಲಿ ಇಂತಹುದೇ ಎಚ್ಚರಿಕೆಯ ಸಂಕೇತಗಳಿಗಾಗಿ ಹುಡುಕಿದ್ದಾರೆ.
ಮಾದರಿಯು ಜನಸಂಖ್ಯಾ ಗಾತ್ರ ಮತ್ತು ಆರ್ಥಿಕ ಸೂಚಕಗಳಿಂದ ಹಿಡಿದು ರಾಜಕೀಯ ಸ್ವಾತಂತ್ರ್ಯ ಮತ್ತು ಸಶಸ್ತ್ರ ಸಂಘರ್ಷಗಳವರೆಗೆ 30ಕ್ಕೂ ಅಧಿಕ ಅಂಶಗಳನ್ನು ಪರಿಶೀಲಿಸಿದೆ. ಐತಿಹಾಸಿಕವಾಗಿ, ಪ್ರತಿ ವರ್ಷ ಸರಾಸರಿ ಒಂದು ಅಥವಾ ಎರಡು ದೇಶಗಳಲ್ಲಿ ಸಾಮೂಹಿಕ ಹತ್ಯೆಗಳ ಹೊಸ ಘಟನೆಗಳು ಸಂಭವಿಸುತ್ತವೆ.
ಯೋಜನೆಯು ಹಿಂಸಾಚಾರವನ್ನು ತಡೆಯಲು ಯಾವ ಕ್ರಮಗಳ ಮೇಲೆ ಗಮನ ಹರಿಸಬೇಕು ಎಂಬುದನ್ನು ನಿರ್ಧರಿಸಲು ಅಧಿಕಾರಿಗಳು ಮತ್ತು ಸಂಸ್ಥೆಗಳಿಗೆ ನೆರವಾಗುವ ಗುರಿಯನ್ನು ಹೊಂದಿದೆ ಎಂದು ಮ್ಯೂಸಿಯಂನ ಜನಾಂಗೀಯ ಹತ್ಯೆ ತಡೆ ಕೇಂದ್ರದ ಸಂಶೋಧನಾ ನಿರ್ದೇಶಕ ಲಾರೆನ್ಸ್ ವೂಚರ್ ಅವರು ವರದಿಯ ಮುನ್ನುಡಿಯಲ್ಲಿ ಬರೆದಿದ್ದಾರೆ. ಹತ್ಯಾಕಾಂಡಗಳನ್ನು ತಡೆಯಬಹುದು ಎಂದು ಒತ್ತಿ ಹೇಳಿರುವ ಅವರು, ಎಚ್ಚರಿಕೆಯ ಸಂಕೇತಗಳನ್ನು ಗಮನಿಸಿ ಆರಂಭಿಕ ಕ್ರಮಗಳನ್ನು ಕೈಗೊಳ್ಳುವ ಮೂಲಕ ವ್ಯಕ್ತಿಗಳು ಮತ್ತು ಸರ್ಕಾರಗಳು ಜೀವಗಳನ್ನು ಉಳಿಸಬಹುದು ಎಂದು ತಿಳಿಸಿದ್ದಾರೆ.
ಅಧ್ಯಯನವು ಪ್ರಚಲಿತ ಹಿಂಸಾಚಾರವು ಇನ್ನಷ್ಟು ಹದಗೆಡಬಹುದೇ ಎಂಬುದನ್ನು ಪರಿಶೀಲಿಸುವುದಕ್ಕಿಂತ, ಭವಿಷ್ಯದಲ್ಲಿ ಹಿಂಸಾಚಾರ ಭುಗಿಲೇಳುವ ಸಾಧ್ಯತೆಯನ್ನು ಮಾತ್ರ ವಿಶ್ಲೇಷಿಸಿದೆ.
ಅರ್ಲಿ ವಾರ್ನಿಂಗ್ ಪ್ರಾಜೆಕ್ಟ್ 2014ರಿಂದ ವಾರ್ಷಿಕ ಅಧ್ಯಯನ ವರದಿಗಳನ್ನು ಬಿಡುಗಡೆ ಮಾಡುತ್ತಿದೆ. ಈ ಅವಧಿಯಲ್ಲಿ ಮ್ಯಾನ್ಮಾರ್ನಲ್ಲಿ ರೋಹಿಂಗ್ಯಾಗಳ ವಿರುದ್ಧ ನರಮೇಧ, ದಕ್ಷಿಣ ಸುಡಾನ್ ಹಾಗೂ ಇಥಿಯೋಪಿಯಾದಲ್ಲಿ ಸಾಮೂಹಿಕ ನಾಗರಿಕ ಸಾವುಗಳು ಸೇರಿದಂತೆ ಅನೇಕ ದೇಶಗಳಲ್ಲಿ ಸಾಮೂಹಿಕ ದೌರ್ಜನ್ಯಗಳು ನಡೆದಿವೆ. ಇಂತಹ ಪ್ರಕರಣಗಳಲ್ಲಿಯೂ ಎಚ್ಚರಿಕೆಗಳನ್ನು ನೀಡಲಾಗಿತ್ತು. ಆದರೆ ಅವು ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂದು ವೂಚರ್ ಹೇಳಿದ್ದಾರೆ.
ಸೌಜನ್ಯ: thewire.in







