ನಾಲ್ಕು ವರ್ಷ ಕೆಳಗಿನ ಮಕ್ಕಳಿಗೆ ನಿರ್ದಿಷ್ಟ ಮಿಶ್ರಣದ ನೆಗಡಿ ಔಷಧಿಗಳನ್ನು ನಿಷೇಧಿಸಿದ ಭಾರತ
ಸಾಂದರ್ಭಿಕ ಚಿತ್ರ (Image by 8photo on Freepik)
ಹೊಸದಿಲ್ಲಿ: ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ chlorpheniramine maleate ಮತ್ತು phenylephrine ಮಿಶ್ರಣದ ಔಷಧಿಗಳನ್ನು ಸಾಮಾನ್ಯ ನೆಗಡಿ ಅಥವಾ ಶೀತದ ಸಮಸ್ಯೆಗೆ ನೀಡುವುದನ್ನು ಭಾರತದ ಔಷಧಿ ನಿಯಂತ್ರಣ ಸಂಸ್ಥೆ ನಿರ್ಬಂಧಿಸಿದೆ. ಭಾರತದಲ್ಲಿ ತಯಾರಿಸಲಾದ ಕೆಮ್ಮಿನ ಸಿರಪ್ ಸೇವಿಸಿ ಜಾಗತಿಕವಾಗಿ 141 ಮಕ್ಕಳ ಸಾವಿನ ವಿದ್ಯಮಾನದ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ.
ಈ ಫಿಕ್ಸೆಡ್ ಡ್ರಗ್ ಕಾಂಬಿನೇಶನ್ ಅಥವಾ ಮಿಶ್ರಣ ಮಕ್ಕಳಿಗೆ ಅನುಮೋದಿತವಲ್ಲ ಎಂಬ ಕುರಿತು ವ್ಯಾಪಕ ಚರ್ಚೆಯ ನಂತರ ನಾಲ್ಕು ವರ್ಷದ ಕೆಳಗಿನ ಮಕ್ಕಳಿಗೆ ಈ ಮಿಶ್ರಣದ ಔಷಧಿಯನ್ನು ನೀಡುವುದನ್ನು ನಿಷೇಧಿಸಲಾಗಿದೆ.
ಈ ಕುರಿತಾದ ಆದೇಶವನ್ನು ಡಿಸೆಂಬರ್ 18ರಂದು ಹೊರಡಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಸಹ ಐದು ವರ್ಷದ ಕೆಳಗಿನ ಮಕ್ಕಳಿಗೆ ಶೀತ ಮತ್ತು ನೆಗಡಿ ಸಮಸ್ಯೆಗಾಗಿ ʼಓವರ್ ದಿ ಕೌಂಟರ್ʼ ಕೆಮ್ಮಿನ ಸಿರಪ್ ಅಥವಾ ಔಷಧಿಗಳನ್ನು ಶಿಫಾರಸು ಮಾಡುವುದಿಲ್ಲ.
2019ರಿಂದೀಚೆಗೆ ಗಾಂಬಿಯಾ, ಉಜ್ಬೆಕಿಸ್ತಾನ್ ಮತ್ತು ಕ್ಯಾಮರೂನ್ನಲ್ಲಿ ಕನಿಷ್ಠ 141 ಮಕ್ಕಳು ಕೆಮ್ಮು ನಿವಾರಕ ಸಿರಪ್ ಸೇವಿಸಿ ಸಾವನ್ನಪ್ಪಿರುವುದು ಭಾರತದಲ್ಲಿ ತಯಾರಾಗುವ ಔಷಧಿಗಳ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನೆತ್ತಿದೆ.