ಏಷ್ಯಾ ಕ್ಯೂಎಸ್ ವಿವಿ ರ್ಯಾಂಕಿಂಗ್: ಚೀನಾವನ್ನು ಹಿಂದಿಕ್ಕಿದ ಭಾರತ
Photo: timesofindia.indiatimes.com
ಹೊಸದಿಲ್ಲಿ: ಏಷ್ಯಾದಲ್ಲಿ ಅತ್ಯಧಿಕ ಪ್ರಾತಿನಿಧ್ಯದ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಹೊಂದಿದ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತ ಈ ನಿಟ್ಟಿನಲ್ಲಿ ಚೀನಾವನ್ನು ಹಿಂದಿಕ್ಕಿದೆ. ಇತ್ತೀಚೆಗೆ ಬಿಡುಗಡೆ ಮಾಡಲಾದ ಕ್ಯೂಎಸ್ ವಿಶ್ವ ವಿವಿ ರ್ಯಾಂಕಿಂಗ್ ನ ಏಷ್ಯಾ ವಿಭಾಗದಲ್ಲಿ ಭಾರತದ 148 ವಿಶ್ವವಿದ್ಯಾನಿಲಯಗಳು ಸ್ಥಾನ ಪಡೆದಿದೆ. ಚೀನಾದ 133 ಹಾಗೂ ಜಪಾನ್ನ 96 ವಿವಿಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಲ್ಲಿವೆ.
ಮುಂಬೈ ಮತ್ತು ದೆಹಲಿ ಐಐಟಿಗಳು ಅಗ್ರ 50 ರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಅಗ್ರ 100ರ ಪಟ್ಟಿಯಲ್ಲಿ ಇತರ 5 ಸಂಸ್ಥೆಗಳು ಸೇರಿವೆ.
ಬುಧವಾರ ಬಿಡುಗಡೆ ಮಾಡಲಾದ ರ್ಯಾಂಕಿಂಗ್ ನಲ್ಲಿ 25 ದೇಶಗಳ 856 ಉನ್ನತ ಶಿಕ್ಷಣ ಸಂಸ್ಥೆಗಳನ್ನು ಹೆಸರಿಸಲಾಗಿದೆ. ಐಐಟಿ ಬಾಂಬೆ, ಕ್ಯೂಎಸ್ ಶೈಕ್ಷಣಿಕ ಮತ್ತು ಉದ್ಯೋಗದಾತರ ಘನತೆ ಸೂಚ್ಯಂಕಗಳಲ್ಲಿ ದೇಶದಲ್ಲೇ ಅಗ್ರಸ್ಥಾನಿಯಾಗಿದೆ. ಈ ಸೂಚ್ಯಂಕಕ್ಕೆ 1.4 ಲಕ್ಷ ಮಂದಿ ಶಿಕ್ಷಣ ತಜ್ಞರು ಮತ್ತು ಉದ್ಯೋಗದಾತರ ಅಭಿಪ್ರಾಯ ಪಡೆಯಲಾಗಿದೆ. ಉದ್ಯೋಗದಾತರ ಪ್ರತಿಷ್ಠೆ ಸೂಚ್ಯಂಕದಲ್ಲಿ ಅಗ್ರ 20 ಏಷ್ಯನ್ ಸಂಸ್ಥೆಗಳ ಪೈಕಿ ಇದು ಸ್ಥಾನ ಪಡೆದಿದೆ.
ಪ್ರಮುಖ ಸೂಚ್ಯಂಕಗಳ ಆಧಾರದಲ್ಲಿ ಭಾರತದ ವಿಶ್ವವಿದ್ಯಾನಿಲಯಗಳ ಪ್ರಮುಖ ಅಂಶಗಳೆಂದರೆ, ಸಂಶೋಧನೆಯ ಗಾತ್ರದಲ್ಲಿ ಅತ್ಯುತ್ತಮ ಸಾಧನೆಗಳು ಭಾರತೀಯ ವಿವಿಗಳಿಂದ ಆಗಿವೆ. ಅಂತೆಯೇ ಒಟ್ಟಾರೆ ಸ್ಥಿರತೆ ದೃಷ್ಟಿಯಲ್ಲೂ ಭಾರತದ ವಿವಿಗಳು ಮುಂದಿದ್ದು, ಶೇಕಡ 50ರಷ್ಟು ವಿವರಗಳು ಸ್ಥಿರ ಅಥವಾ ಸುಧಾರಿತ ಪ್ರದರ್ಶನ ನೀಡಿವೆ. ಅತ್ಯುತ್ತಮ ತರಬೇತಿ ಪಡೆದ ಬೋಧಕ ಸಿಬ್ಬಂದಿಯ ವಿಚಾರದಲ್ಲೂ ಭಾರತದ ವಿವಿಗಳು ಮುಂದಿವೆ.