ದೀಪಂ ವಿವಾದ: ನ್ಯಾಯಾಧೀಶರ ವಿರುದ್ಧ ವಾಗ್ದಂಡನೆಗೆ ಲೋಕಸಭಾ ಸ್ಪೀಕರ್ಗೆ ನೋಟಿಸ್ ಸಲ್ಲಿಸಿದ ಡಿಎಂಕೆ

Photo Credit : PTI
ಚೆನ್ನೈ: ಆಡಳಿತಾರೂಢ ಡಿಎಂಕೆ ಮದ್ರಾಸ್ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಜಿ.ಆರ್.ಸ್ವಾಮಿನಾಥನ್ ವಿರುದ್ಧ ವಾಗ್ಡಂಡನೆ ಪ್ರಕ್ರಿಯೆಗಳನ್ನು ಕೋರಿ ನೋಟಿಸನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮಂಗಳವಾರ ಸಲ್ಲಿಸಿದೆ.
ಇಂಡಿಯಾ ಮೈತ್ರಿಕೂಟದ ಸಂಸದರ ನಿಯೋಗವು 120 ಸಹಿಗಳಿರುವ ವಾಗ್ದಂಡನೆ ನೋಟಿಸನ್ನು ಸ್ಪೀಕರ್ಗೆ ಹಸ್ತಾಂತರಿಸಿತು.
ದೇವಸ್ಥಾನ ಮತ್ತು ಸಮೀಪದಲ್ಲಿ ದರ್ಗಾ ಇರುವ ತಿರುಪ್ಪರಂಕುಂಡ್ರಂ ಬೆಟ್ಟದ ಮೇಲೆ ಸಾಂಪ್ರದಾಯಿಕ ಕಾರ್ತಿಕೋತ್ಸವದ ದೀಪವನ್ನು ಬೆಳಗಿಸಲು ಅನುಮತಿ ನೀಡಿ ನ್ಯಾ.ಸ್ವಾಮಿನಾಥನ್ ಅವರು ಆದೇಶಿಸಿದ ಬಳಿಕ ಹೊಗೆಯಾಡುತ್ತಿರುವ ವಿವಾದದ ನಡುವೆಯೇ ಈ ಬೆಳವಣಿಗೆ ನಡೆದಿದೆ.
ನ್ಯಾಯಾಲಯದ ಆದೇಶದಂತೆ ಡಿ.4ರ ವೇಳೆಗೆ ‘ದೀಪತ್ತೋನ್’ ಸ್ತಂಭದ ಮೇಲೆ ದೀಪವನ್ನು ಬೆಳಗಿಸಬೇಕಿತ್ತು. ದೇವಸ್ಥಾನದ ಅಧಿಕಾರಿಗಳು ಮತ್ತು ದರ್ಗಾ ಆಡಳಿತ ಸಮಿತಿ ಎತ್ತಿದ್ದ ಆಕ್ಷೇಪಣೆಗಳನ್ನು ತಿರಸ್ಕರಿಸಿದ್ದ ನ್ಯಾಯಾಧೀಶರು, ಇದರಿಂದ ಮುಸ್ಲಿಮ್ ಸಮುದಾಯದ ಧಾರ್ಮಿಕ ಹಕ್ಕುಗಳ ಉಲ್ಲಂಘನೆಯಾಗುವುದಿಲ್ಲ ಎಂದು ಪ್ರತಿಪಾದಿಸಿದ್ದರು. ಪೋಲಿಸರ ಬೆಂಗಾವಲಿನೊಂದಿಗೆ ದೀಪ ಹಚ್ಚುವ ವಿಧಿಯನ್ನು ನಡೆಸಲು ಭಕ್ತರ ಸಣ್ಣ ಗುಂಪೊಂದಕ್ಕೆ ಅವಕಾಶ ಒದಗಿಸುವಂತೆಯೂ ನ್ಯಾಯಾಲಯವು ನಿರ್ದೇಶನ ನೀಡಿತ್ತು.
ಆದರೆ ರಾಜ್ಯ ಸರಕಾರವು ಕಾನೂನು ಮತ್ತು ಸುವ್ಯವಸ್ಥೆ ಕಳವಳಗಳನ್ನು ಉಲ್ಲೇಖಿಸಿ ನ್ಯಾಯಾಲಯದ ಆದೇಶವನ್ನು ಪಾಲಿಸಲು ನಿರಾಕರಿಸಿತ್ತು. ಇದು ಹಿಂದುತ್ವ ಪರ ಗುಂಪುಗಳಿಂದ ಪ್ರತಿಭಟನೆಗಳು,ಪೋಲಿಸರೊಂದಿಗೆ ಸಂಘರ್ಷಗಳಿಗೆ ಕಾರಣವಾಗಿದ್ದು, ಈಗ ಪ್ರಮುಖ ರಾಜಕೀಯ ಮತ್ತು ನ್ಯಾಯಾಂಗ ಸಂಘರ್ಷವಾಗಿ ಉಲ್ಬಣಗೊಂಡಿದೆ.







