ಚೀನಾ, ಟರ್ಕಿಯ ಸರಕಾರಿ ಮಾಧ್ಯಮಗಳ ಎಕ್ಸ್ ಖಾತೆಗಳನ್ನು ನಿರ್ಬಂಧಿಸಿದ ಭಾರತ

PC : X \ NDTV
ಹೊಸದಿಲ್ಲಿ: ಭಾರತದ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿ ತಪ್ಪು ಮಾಹಿತಿ ಹಾಗೂ ಕಾರ್ಯಸೂಚಿಯನ್ನು ಹರಡಲಾಗುತ್ತಿದೆ ಎಂಬ ಆರೋಪದ ಮೇಲೆ, ಚೀನಾ ಹಾಗೂ ಟರ್ಕಿ ಸರಕಾರಿ ಮಾಧ್ಯಮಗಳಿಗೆ ಸಂಬಂಧಿಸಿದ ಹಲವು ಎಕ್ಸ್ ಖಾತೆಗಳನ್ನು ಭಾರತ ನಿರ್ಬಂಧಿಸಿದೆ.
ಹೀಗೆ ನಿರ್ಬಂಧಿಸಲಾಗಿರುವ ಎಕ್ಸ್ ಖಾತೆಗಳ ಪೈಕಿ ಟರ್ಕಿ ಸರಕಾರ ಹಣಕಾಸು ನೆರವು ಒದಗಿಸಿರುವ ಅಂತಾರಾಷ್ಟ್ರೀಯ ಸುದ್ದಿ ಮಾಧ್ಯಮವಾದ ಟಿಆರ್ಟಿ ವರ್ಲ್ಡ್ ಮತ್ತು ಚೀನಾ ಸರಕಾರದ ನಿಯಂತ್ರಣದಲ್ಲಿರುವ ಸುದ್ದಿ ಮಾಧ್ಯಮಗಳಾದ ಗ್ಲೋಬಲ್ ಟೈಮ್ಸ್ ಮತ್ತು ಕ್ಸಿನುವಾ ಸೇರಿವೆ.
ಭಾರತದ ಸೇನಾ ಕಾರ್ಯಾಚರಣೆ ಕುರಿತು ಗ್ಲೋಬಲ್ ಟೈಮ್ಸ್ ನ ಪ್ರಸಾರದ ವಿರುದ್ಧ ಎಚ್ಚರಿಸಿದ್ದ ಚೀನಾದಲ್ಲಿನ ಭಾರತೀಯ ರಾಯಭಾರ ಕಚೇರಿ, ಈ ವಾರದ ಆರಂಭದಲ್ಲಿ ಚೀನಾ ಬಳಿ ಸಾರ್ವಜನಿಕರ ಅಸಮಾಧಾನವನ್ನು ದಾಖಲಿಸಿತ್ತು. ಈ ಕುರಿತು ನೇರವಾಗಿ ಪೋಸ್ಟ್ ಮಾಡಿದ್ದ ಭಾರತೀಯ ರಾಯಭಾರ ಕಚೇರಿ, “ಪ್ರಿಯ ಗ್ಲೋಬಲ್ ಟೈಮ್ಸ್ ನ್ಯೂಸ್, ಈ ಬಗೆಯ ತಪ್ಪು ಮಾಹಿತಿಗಳನ್ನು ಪ್ರಸಾರ ಮಾಡುವುದಕ್ಕೂ ಮುನ್ನ, ನಿಮ್ಮ ಸುದ್ದಿಗಳನ್ನು ಪರಿಶೀಲಿಸಿ ಹಾಗೂ ನಿಮ್ಮ ಮೂಲಗಳನ್ನು ಮರು ಪರೀಕ್ಷೆಗೊಳಪಡಿಸಿ” ಎಂದು ತಿರುಗೇಟು ನೀಡಿತ್ತು.
ಇದರ ಬೆನ್ನಿಗೇ ಮತ್ತೊಂದು ಪೋಸ್ಟ್ ಮಾಡಿದ್ದ ರಾಯಭಾರ ಕಚೇರಿ, ಭಾರತೀಯ ಸಶಸ್ತ್ರ ಪಡೆಗಳು ನಷ್ಟ ಅನುಭವಿಸಿವೆ ಎಂಬ ಆರೋಪಗಳಿಗೆ ಸಂಬಂಧಿಸಿದಂತೆ, ಪಾಕಿಸ್ತಾನದ ಪರ ಸಹಾನುಭೂತಿ ಹೊಂದಿರುವ ಹಲವು ಸಾಮಾಜಿಕ ಮಾಧ್ಯಮ ಖಾತೆಗಳು ನಿರಾಧಾರ ಸಂಗತಿಗಳನ್ನು ಹಂಚುತ್ತಿವೆ ಎಂದೂ ಆರೋಪಿಸಿತ್ತು.