ತಿಂಗಳಾಂತ್ಯದೊಳಗೆ ಭಾರತ-ಚೀನಾ ನೇರ ವಿಮಾನಯಾನ ಪುನರಾರಂಭ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಅ.2: ಈ ತಿಂಗಳ ಅಂತ್ಯದೊಳಗೆ ಉಭಯದೇಶಗಳ ನಡುವೆ ವಾಣಿಜ್ಯ ವಿಮಾನಗಳ ನೇರ ಯಾನವನ್ನು ಪುನರಾರಂಭಿಸಲು ಭಾರತ ಹಾಗೂ ಚೀನಾ ನಿರ್ಧರಿಸಿವೆ. 2020ರ ಗಲ್ವಾನ್ ಗಡಿ ಸಂಘರ್ಷದ ಬಳಿಕ ಹದಗೆಟ್ಟಿದ್ದ ಉಭಯದೇಶಗಳ ನಡುವಣ ದ್ವಿಪಕ್ಷೀಯ ಬಾಂಧವ್ಯವನ್ನು ಸಹಜಗೊಳಿಸುವ ನಿಟ್ಟಿನಲ್ಲಿ ಇದೊಂದು ಗಮನಾರ್ಹ ನಡೆಯೆಂದು ಬಣ್ಣಿಸಲಾಗಿದೆ.
ಎರಡೂ ದೇಶಗಳ ನಾಗರಿಕ ವಿಮಾನಯಾನ ಅಧಿಕಾರಿಗಳ ನಡುವಣ ತಾಂತ್ರಿಕ ಮಟ್ಟದ ಮಾತುಕತೆಗಳ ಬಳಿಕ ಈ ಘೋಷಣೆ ಹೊರಬಿದ್ದಿದೆ. ಭಾರತ ಹಾಗೂ ಚೀನಾ ಮಧ್ಯೆ ಬಾಂಧವ್ಯಗಳನ್ನು ಹಂತಹಂತವಾಗಿ ಸಹಜಗೊಳಿಸುವ ನಿಟ್ಟಿನಲ್ಲಿ ಭಾರತ ಸರಕಾರದ ವಿಸ್ತೃತ ನಿಲುವು ಇದಾಗಿದೆಯೆಂದು ವಿದೇಶಾಂಗ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.
2025ರ ಅಕ್ಟೋಬರ್ ಅಂತ್ಯದೊಳಗೆ ಉಭಯದೇಶಗಳಲ್ಲಿನ ನಿಯೋಜಿತ ಸ್ಥಳಗಳನ್ನು ಸಂಪರ್ಕಿಸುವ ವಿಮಾನಗಳ ಹಾರಾಟವನ್ನು ಪುನಾರಂಭಿಸಲು ಇತ್ತಂಡಗಳು ಒಪ್ಪಿಕೊಂಡಿರುವುದಾಗಿ ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ.
ಆದರೆ, ಈ ನಿರ್ಧಾರವು ನಿಯೋಜಿತ ವಿಮಾನಗಳು ವಾಣಿಜ್ಯಾತ್ಮಕವಾದ ಹಾರಾಟವನ್ನು ನಡೆಸಲು ಹೊಂದಿರುವ ಸಿದ್ಧತೆಯನ್ನು ಹಾಗೂ ಅವುಗಳ ಕಾರ್ಯನಿರ್ವಹಣೆಯ ಮಾನದಂಡಗಳ ಈಡೇರಿಕೆಯ ಸಾಮರ್ಥ್ಯವನ್ನು ಅವಲಂಭಿಸಿರುತ್ತದೆ. ಉಭಯದೇಶಗಳ ನಡುವೆ ನೇರ ವಿಮಾನಯಾನಗಳ ಪುನರ್ಆರಂಭವು ಉದ್ಯಮಿಗಳು, ವಿದ್ಯಾರ್ಥಿಗಳು ಹಾಗೂ ಕುಟುಂಬಗಳು ಪ್ರಯಾಣ ಸೌಲಭ್ಯವನ್ನು ಸುಧಾರಣೆಗೊಳಿಸುವ ನಿರೀಕ್ಷೆಯಿದೆ. ಕೋವಿಡ್ 19 ಸಾಂಕ್ರಾಮಿಕದ ಆನಂತರ ಚೀನಾ ಹಾಗೂ ಭಾರತ ನಡುವೆ ವಿಮಾನಯಾನಗಳನ್ನು ಅಮಾನತಿನಲ್ಲಿರಿಸಿದ ಬಳಿಕ ಉಭಯದೇಶಗಳ ನಡುವೆ ಪ್ರಯಾಣಿಸಲು ಅಡಚಣೆಯುಂಟಾಗಿತ್ತು.







