ಮತಾಂಧತೆಯಲ್ಲಿ ಮುಳುಗಿದೆ : ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಪಾಕಿಸ್ತಾನವನ್ನು ಟೀಕಿಸಿದ ಭಾರತ

PC : PTI
ಹೊಸದಿಲ್ಲಿ : ʼಭಯೋತ್ಪಾದನೆ ಮತ್ತು ಮತಾಂದತೆಯಲ್ಲಿ ಮುಳುಗಿರುವ ರಾಷ್ಟ್ರʼ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ (UNSC) ಭಾರತ ಪಾಕಿಸ್ತಾನವನ್ನು ಟೀಕಿಸಿದೆ.
ಭಾರತದ ಖಾಯಂ ಪ್ರತಿನಿಧಿ ರಾಯಭಾರಿ ಪರ್ವತನೇನಿ ಹರೀಶ್ ಅವರು ಪಾಕಿಸ್ತಾನ ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆ ಮತ್ತು ಆರ್ಥಿಕತೆಯನ್ನು ತಪ್ಪಾಗಿ ನಿರ್ವಹಣೆ ಮಾಡಿದೆ ಎಂದು ಟೀಕಿಸಿದ್ದಾರೆ.
ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಉತ್ತೇಜಿಸುವ ಕುರಿತು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಉನ್ನತ ಮಟ್ಟದ ಚರ್ಚೆಯಲ್ಲಿ ಮಾತನಾಡಿದ ಪರ್ವತನೇನಿ ಹರೀಶ್, ಪಾಕಿಸ್ತಾನವನ್ನು IMF(ಅಂತಾರಾಷ್ಟ್ರೀಯ ಹಣಕಾಸು ನಿಧಿ)ಯಿಂದ ಸರಣಿ ಸಾಲಗಾರ, ಭಯೋತ್ಪಾದನೆ ಮತ್ತು ಮತಾಂದತೆಯಲ್ಲಿ ಮುಳುಗಿರುವ ರಾಷ್ಟ್ರ ಎಂದು ಟೀಕಿಸಿದ್ದಾರೆ.
ಒಂದೆಡೆ, ಪ್ರಬುದ್ಧ ಪ್ರಜಾಪ್ರಭುತ್ವ, ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಮತ್ತು ಬಹುತ್ವ ಮತ್ತು ಎಲ್ಲರನ್ನೂ ಒಳಗೊಂಡ ಸಮಾಜವನ್ನು ಹೊಂದಿರುವ ಭಾರತವಿದೆ. ಇನ್ನೊಂದು ಕಡೆ ಪಾಕಿಸ್ತಾನ ಮತಾಂಧತೆ ಮತ್ತು ಭಯೋತ್ಪಾದನೆಯಲ್ಲಿ ಮುಳುಗಿದೆ. IMF (ಅಂತಾರಾಷ್ಟ್ರೀಯ ಹಣಕಾಸು ನಿಧಿ) ಯಿಂದ ಸರಣಿ ಸಾಲಗಾರನಾಗಿದೆ ಎಂದು ಹೇಳಿದರು.
ಗಡಿಯಾಚೆಗಿನ ಭಯೋತ್ಪಾದನೆಯನ್ನು ಉತ್ತೇಜಿಸುವ ಮೂಲಕ ನೆರೆಹೊರೆಯ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳ ಮನೋಭಾವವನ್ನು ಉಲ್ಲಂಘಿಸುವ ದೇಶಗಳಿಗೆ ಗಂಭೀರ ಶಿಕ್ಷೆ ವಿಧಿಸಬೇಕು ಎಂದು ಇದೇ ವೇಳೆ ಹರೀಶ್ ಹೇಳಿದರು.







