ಉಚಿತ ಪಡಿತರ, ಅಕ್ಕಿ ರಫ್ತು ನಿಷೇಧದ ಕುರಿತು ವಿಶ್ವ ವಾಣಿಜ್ಯ ಸಂಘಟನೆಯಿಂದ ಪ್ರಶ್ನೆಗಳನ್ನು ಎದುರಿಸುತ್ತಿರುವ ಭಾರತ

ಸಾಂದರ್ಭಿಕ ಚಿತ್ರ (Photo: PTI)
ಹೊಸದಿಲ್ಲಿ: ಕೃಷಿ ಕುರಿತು ವಿಶ್ವ ವಾಣಿಜ್ಯ ಸಂಘಟನೆ (ಡಬ್ಲ್ಯುಟಿಒ) ಸಮಿತಿಯ ಸಭೆಯು ಸೋಮವಾರ ಆರಂಭಗೊಂಡಿದ್ದು, ಭಾರತವು ಉಚಿತ ಪಡಿತರ ವಿತರಣೆಯ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ (ಪಿಎಂಜಿಕೆಎವೈ)ಯನ್ನು ಇನ್ನೂ ಐದು ವರ್ಷಗಳಿಗೆ ವಿಸ್ತರಣೆಯ ಡಬ್ಲ್ಯುಟಿಒ ಸಮಂಜಸತೆಯ ಕುರಿತು ಸ್ಪಷ್ಟನೆ ಮತ್ತು ಬಾಸ್ಮತಿಯೇತರ ಅಕ್ಕಿಯ ರಫ್ತಿನ ಮೇಲೆ ನಿಷೇಧದ ಹಿಂದಿನ ಕಾರಣಗಳನ್ನು ಜಾಗತಿಕ ನಾಯಕರಿಗೆ ಒದಗಿಸಬೇಕಾಗಬಹುದು.
ಅಮೆರಿಕ, ಐರೋಪ್ಯ ಒಕ್ಕೂಟ,ಕೆನಡಾ,ಆಸ್ಟ್ರೇಲಿಯಾ,ಸ್ವಿಟ್ಝರ್ಲ್ಯಾಂಡ್ ಮತ್ತು ನ್ಯೂಝಿಲ್ಯಾಂಡ್ ಸೇರಿದಂತೆ ಡಬ್ಲ್ಯುಟಿಒ ಸದಸ್ಯ ದೇಶಗಳು ಪ್ರಮುಖವಾಗಿ ಭಾರತದ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಬದ್ಧತೆಗಳು ಮತ್ತು ರಫ್ತು ನಿರ್ಬಂಧಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಎತ್ತಿವೆ ಎಂದು ಹೇಳಲಾಗಿದೆ ಎಂದು business-standard.com ವರದಿ ಮಾಡಿದೆ.
ಈ ವರ್ಷದ ಜು.20ರಂದು ಹಬ್ಬಗಳ ಋತು ಸಮೀಪಿಸುತ್ತಿದ್ದಂತೆ ದೇಶಿಯ ಪೂರೈಕೆಯನ್ನು ಹೆಚ್ಚಿಸಲು ಮತ್ತು ಚಿಲ್ಲರೆ ಮಾರಾಟ ಬೆಲೆಗಳನ್ನು ನಿಯಂತ್ರಿಸಲು ಭಾರತವು ಬಾಸ್ಮತಿಯೇತರ ಬಿಳಿ ಅಕ್ಕಿಯ ರಫ್ತುಗಳನ್ನು ನಿಷೇಧಿಸಿತ್ತು. ಸೆ.27ರಂದು ಡಬ್ಲ್ಯುಟಿಒದ ಕೃಷಿ ಸಮಿತಿಯ ಸಭೆಯಲ್ಲಿ ಸದಸ್ಯ ದೇಶಗಳು ಎತ್ತಿದ್ದ ಪ್ರಶ್ನೆಗಳಿಗ ಉತ್ತರಿಸಿದ್ದ ಭಾರತೀಯ ಅಧಿಕಾರಿಗಳು ಅಕ್ಕಿಯ ಮೇಲಿನ ನಿಷೇಧವು ನಿರ್ಬಂಧಕ್ಕಿಂತ ನಿಯಂತ್ರಣ ವಿಧಾನವಾಗಿದೆ ಎಂದು ತಿಳಿಸಿದ್ದರು. ದೇಶದ 140 ಕೋಟಿ ಜನತೆಯ ಆಹಾರ ಭದ್ರತೆಯನ್ನು ಖಚಿತಪಡಿಸಲು ನಿಷೇಧವು ನಿರ್ಣಾಯಕ ಕ್ರಮವಾಗಿದೆ ಎಂದು ಅಧಿಕಾರಿಗಳು ಒತ್ತಿ ಹೇಳಿದ್ದರು.
ಮಾಧ್ಯಮ ವರದಿಯ ಪ್ರಕಾರ, ವಿಸ್ತರಿತ ಪಿಎಂಜಿಕೆಎವೈ ಅಡಿ ಖರೀದಿಗಳನ್ನು ಡಬ್ಲ್ಯುಟಿಒದ ದೇಶಿಯ ಬೆಂಬಲ ಬದ್ಧತೆಗಳ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುವ ಸರಕಾರಿ ನಿಗದಿತ ಬೆಲೆಗಳಲ್ಲಿ ಮಾಡಲಾಗುವುದೇ ಎಂದು ಕೆನಡಾ ನಿರ್ದಿಷ್ಟವಾಗಿ ಪ್ರಶ್ನಿಸಿದೆ. ವ್ಯಾಪಾರ ವಿರೂಪತೆಗಳನ್ನು ಕಡಿಮೆಗೊಳಿಸಲು ಪ್ರಸ್ತುತ ಮಾರುಕಟ್ಟೆ ಬೆಲೆಗಳಲ್ಲಿ ಖರೀದಿಯನ್ನು ಪ್ರತಿಪಾದಿಸಿರುವ ಕೆನಡಾ,ಈ ವಿಧಾನವು ಹೆಚ್ಚು ಪರಿಣಾಮಕಾರಿ ಎನ್ನುವ ವಾದಕ್ಕೆ ವಿವರಣೆಯನ್ನು ನೀಡುವಂತೆ ಭಾರತಕ್ಕೆ ಸೂಚಿಸಿದೆ.
ಭಾರತವು ‘ಶಾಂತಿ ನಿಬಂಧನೆ’ಯನ್ನು ಕೋರಿದ್ದು, ಇದು ಅಭಿವೃದ್ಧಿಶೀಲ ದೇಶಗಳು ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ಶೇ.10 ಸಬ್ಸಿಡಿ ಮಿತಿಯನ್ನು ಮೀರಲು ಅವಕಾಶ ಕಲ್ಪಿಸಿದೆ. ಇದು ರಫ್ತು ನಿಷೇಧದ ಬಳಿಕ ಕೆಲವು ದೇಶಗಳಿಗೆ ಬಾಸ್ಮತಿಯೇತರ ಅಕ್ಕಿಗೆ ರಫ್ತು ಕೋಟಾಗಳನ್ನು ನೀಡುವ ಭಾರತದ ನಿರ್ಧಾರದ ಕುರಿತು ಪ್ರಶ್ನೆಗಳನ್ನೆತ್ತಿದೆ.
ನಿಷೇಧದ ಸಮಯದಲ್ಲಿ ಕೆಲವು ಮಾಧ್ಯಮ ವರದಿಗಳು ಭಾರತದಲ್ಲಿ ದೇಶಿಯ ಮಾರುಕಟ್ಟೆ ಬೇಡಿಕೆಗಳನ್ನು ಈಡೇರಿಸಲು ಸಾಕಷ್ಟು ಅಕ್ಕಿ ಪೂರೈಕೆಯಿದೆ ಎಂದು ಸೂಚಿಸಿದ್ದವು. ಇದರ ಆಧಾರದಲ್ಲಿ ಅಮೆರಿಕ,ಬ್ರಿಟನ್ ಮತ್ತು ಸ್ವಿಟ್ಝರ್ಲ್ಯಾಂಡ್ ‘ರಫ್ತು ನಿರ್ಬಂಧವನ್ನು ಜಾರಿಗೆ ತಂದಿದ್ದ ಸಮಯದಲ್ಲಿ ಭಾರತವು ದೇಶಿಯ ಅಗತ್ಯಗಳಿಗೆ ಎಷ್ಟು ಅಕ್ಕಿ ದಾಸ್ತಾನು ಸಮಂಜಸ ಎಂದು ಪರಿಗಣಿಸಿತ್ತು?’ ಎಂದು ತಮ್ಮ ವರದಿಗಳಲ್ಲಿ ಪ್ರಶ್ನಿಸಿವೆ.
ರಫ್ತು ನಿಷೇಧಗಳು ಮತ್ತು ಸುಂಕಗಳು ಹಾಗೂ ನಿಷೇಧದ ನಿರ್ದಿಷ್ಟತೆಗಳು ಮತ್ತು ಕಾರಣಗಳು ಸೇರಿದಂತೆ ಭಾರತದ ತಾತ್ಕಾಲಿಕ ಕೃಷಿ ಸಂಬಂಧಿತ ಕ್ರಮಗಳ ಮುಕ್ತಾಯ ದಿನಗಳ ಬಗ್ಗೆಯೂ ಸದಸ್ಯ ದೇಶಗಳು ಸ್ಪಷ್ಟನೆಯನ್ನು ಕೇಳಿವೆ.







