ಪಾಕಿಸ್ತಾನದ ಡ್ರೋನ್, ಕ್ಷಿಪಣಿ ದಾಳಿಯನ್ನು ವಿಫಲಗೊಳಿಸಿದ ಭಾರತ; ಲಾಹೋರ್ನಲ್ಲಿ ಪಾಕಿಸ್ತಾನದ ಏರ್ ಡಿಫೆನ್ಸ್ ಸಿಸ್ಟಮ್ ಧ್ವಂಸ

Photo credit: PTI
ಹೊಸದಿಲ್ಲಿ: ಆಪರೇಷನ್ ಸಿಂಧೂರ ಕಾರ್ಯಚರಣೆಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನ ಭಾರತದಲ್ಲಿನ 15 ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿದೆ. ಇದರ ಬೆನ್ನಲ್ಲೇ ಭಾರತ ಲಾಹೋರ್ ನಲ್ಲಿ ಪಾಕಿಸ್ತಾನದ ಏರ್ ಡಿಫೆನ್ಸ್ ಸಿಸ್ಟಮ್ ನ್ನು ಧ್ವಂಸಗೊಳಿಸಿದೆ ಎಂದು ಸರಕಾರದ ಮೂಲಗಳು ತಿಳಿಸಿರುವ ಬಗ್ಗೆ indiatoday.in ವರದಿ ಮಾಡಿದೆ.
ಲಾಹೋರ್ನಲ್ಲಿ ಚೀನಾ ಅಭಿವೃದ್ಧಿಪಡಿಸಿದ ಪಾಕಿಸ್ತಾನದ HQ-9 ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಘಟಕಗಳನ್ನು ಇಸ್ರೇಲ್ ನಿರ್ಮಿತ ಭಾರತದ HAROP ಡ್ರೋನ್ಗಳು ಹೊಡೆದುರುಳಿಸಿದೆ.
ಲಾಹೋರ್ ಬಳಿ ಒಂದು ಡ್ರೋನ್ ಪತನಗೊಂಡಿದೆ. ಲಾಹೋರ್ನಲ್ಲಿ ನಾಲ್ವರು ಸೇನಾ ಸಿಬ್ಬಂದಿ ಗಾಯಗೊಂಡಿದ್ದಾರೆ ಮತ್ತು ಸಿಂಧ್ನ ಮಿಯಾನೋದಲ್ಲಿ ಓರ್ವ ನಾಗರಿಕ ಮೃತಪಟ್ಟಿದ್ದಾನೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತದ ಆಪರೇಷನ್ ಸಿಂಧೂರ ಕಾರ್ಯಚರಣೆ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಮೇ 7 ಮತ್ತು 8ರ ಮಧ್ಯರಾತ್ರಿ ಪಾಕಿಸ್ತಾನ ಅವಂತಿಪುರ, ಶ್ರೀನಗರ, ಜಮ್ಮು, ಪಠಾಣ್ ಕೋಟ್, ಅಮೃತಸರ, ಕಪುರ್ತಲಾ, ಜಲಂಧರ್, ಲುಧಿಯಾನ, ಆದಂಪುರ, ಭಟಿಂಡಾ, ಚಂಡೀಗಢ ಸೇರಿದಂತೆ ಹಲವೆಡೆ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ಡ್ರೋನ್ಗಳು ಮತ್ತು ಕ್ಷಿಪಣಿಗಳನ್ನು ಬಳಸಿ ದಾಳಿ ಮಾಡಲು ಪ್ರಯತ್ನಿಸಿತು. ಆದರೆ ಡ್ರೋನ್ಗಳು ಮತ್ತು ಕ್ಷಿಪಣಿಗಳನ್ನು ಇಂಟಿಗ್ರೇಟೆಡ್ ಕೌಂಟರ್ ಯುಎಎಸ್ ಗ್ರಿಡ್ ಮತ್ತು ರಷ್ಯಾ ನಿರ್ಮಿತ ಎಸ್ -400 'ಸುದರ್ಶನ್ ಚಕ್ರ' ವಾಯು ರಕ್ಷಣಾ ವ್ಯವಸ್ಥೆಗಳು ವಿಫಲಗೊಳಿಸಿದೆ ಎಂದು ಸರಕಾರ ಹೇಳಿಕೆಯಲ್ಲಿ ತಿಳಿಸಿದೆ.