ಮೊದಲ ಎರಡು ಕೋವಿಡ್ ಸಾಂಕ್ರಾಮಿಕದ ವರ್ಷಗಳಲ್ಲಿ ಭಾರತದಲ್ಲಿ ಶೇ.9.3ರಷ್ಟು ಹೆಚ್ಚುವರಿ ಸಾವುಗಳು ಸಂಭವಿಸಿದ್ದವು: ಸರಕಾರಿ ಮೂಲಗಳು

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: 2020 ಮತ್ತು 2021ರ ಮೊದಲ ಎರಡು ಕೋವಿಡ್ ಸಾಂಕ್ರಾಮಿಕದ ವರ್ಷಗಳಲ್ಲಿ ಭಾರತದಲ್ಲಿ ಶೇ.9.3ರಷ್ಟು ಹೆಚ್ಚುವರಿ ಸಾವುಗಳು ದಾಖಲಾಗಿದ್ದವು ಎಂದು ಇತ್ತೀಚಿನ ನಾಗರಿಕ ನೋಂದಣಿ ವ್ಯವಸ್ಥೆ(ಸಿಆರ್ಎಸ್)ಯ ಡೇಟಾವನ್ನು ಉಲ್ಲೇಖಿಸಿ ಸರಕಾರಿ ಮೂಲಗಳು ಶನಿವಾರ ತಿಳಿಸಿವೆ ಎಂದು Times of India ವರದಿ ಮಾಡಿದೆ.
ಸಾಂಕ್ರಾಮಿಕ ರೋಗವಿಲ್ಲದಿದ್ದಾಗ ಸಂಭವಿಸಿದ್ದ ಸಾವುಗಳಿಗೆ ಹೋಲಿಸಿದರೆ ಯಾವುದೇ ಕಾರಣದಿಂದ ಉಂಟಾದ ಹೆಚ್ಚುವರಿ ಸಾವುಗಳು ಉನ್ನತ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸಿದ್ದವು. 2020-21ರಲ್ಲಿ ಅಮೆರಿಕದಲ್ಲಿ ಸಾಮಾನ್ಯಕ್ಕಿಂತ ಶೇ.17.6ರಷ್ಟು ಸಾವುಗಳು ವರದಿಯಾಗಿದ್ದರೆ, ಬ್ರಿಟನ್ನಲ್ಲಿ ಶೇ.11.8, ರಶ್ಯಾದಲ್ಲಿ ಶೇ.29.9,ಫ್ರಾನ್ಸ್ನಲ್ಲಿ ಶೇ.6.7, ಜರ್ಮನಿಯಲ್ಲಿ ಶೇ.5.3 ಮತ್ತು ಕೆನಡಾಗಳಲ್ಲಿ ಶೇ.5.2ರಷ್ಟು ಹೆಚ್ಚುವರಿ ಸಾವುಗಳು ಸಂಭವಿಸಿದ್ದವು. ಮಧ್ಯಮ ಆದಾಯದ ದೇಶಗಳ ಪೈಕಿ ಮೆಕ್ಸಿಕೋದಲ್ಲಿ ಶೇ.43.6, ಬ್ರೆಝಿಲ್ನಲ್ಲಿ ಶೇ.12.6ರಷ್ಟು ಹೆಚ್ಚುವರಿ ಸಾವುಗಳು ಸಂಭವಿಸಿದ್ದವು ಎಂದು ಈ ಮೂಲಗಳು ತಿಳಿಸಿವೆ.
ಈ ಹಿಂದೆ ಮಾಡೆಲಿಂಗ್ ವಿಧಾನದ ಆಧಾರಲ್ಲಿ 2020 ಮತ್ತು 2021ರಲ್ಲಿ ಭಾರತದಲ್ಲಿ ಅತಿಯಾದ ಸಾವುಗಳು ಸಂಭವಿಸಿದ ವರದಿಗಳು ಸಾರ್ವಜನಿಕವಾಗಿ ಬಹಿರಂಗಗೊಂಡಿವೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯೊಂದು ಭಾರತದಲ್ಲಿ 47 ಲಕ್ಷ ಹೆಚ್ಚುವರಿ ಸಾವುಗಳು ಸಂಭವಿಸಿವೆ ಎಂದು ಅಂದಾಜಿಸಿತ್ತು. ಪ್ರಮುಖ ಜರ್ನ್ಲ್ವೊಂದರಲ್ಲಿನ ಇನ್ನೊಂದು ವರದಿಯು ಈ ಅವಧಿಯಲ್ಲಿ ಸುಮಾರು 41 ಲಕ್ಷ ಹೆಚ್ಚುವರಿ ಸಾವುಗಳನ್ನು ಉಲ್ಲೇಖಿಸಿತ್ತು. ಹೆಚ್ಚುವರಿ ಸಾವುಗಳು ಕೋವಿಡ್ ಸಾಂಕ್ರಾಮಿಕದಿಂದಲೇ ಸಂಭವಿಸಿದ್ದವು ಮತ್ತು ಭಾರತ ಸರಕಾರ ಅವುಗಳನ್ನು ಕಡಿಮೆಯಾಗಿ ತೋರಿಸಿತ್ತು ಎಂದು ಕೆಲವು ತಜ್ಞರೂ ಹೇಳಿದ್ದರು.
ಈ ಎರಡು ವರ್ಷಗಳಲ್ಲಿ ಸಂಭವಿಸಿದ್ದ ಹೆಚ್ಚುವರಿ ಸಾವುಗಳೆಲ್ಲ ಕೋವಿಡ್ನಿಂದ ಉಂಟಾಗಿದ್ದ ಸಾವುಗಳಾಗಿರಲಿಲ್ಲ ಎಂದು ಸರಕಾರಿ ಮೂಲಗಳು ಹೇಳಿವೆ. ಇವುಗಳಲ್ಲಿ ಕೋವಿಡ್ ಸಾವುಗಳು(2021ರ ಅಂತ್ಯದ ವೇಳೆಗೆ 4.81 ಲಕ್ಷ), ವರದಿಯಾಗದ ಕೋವಿಡ್ ಸಾವುಗಳು, ಇತರ ಎಲ್ಲ ಕಾರಣಗಳಿಂದ ಸಂಭವಿಸಿರುವ ಸಾವುಗಳು ಮತ್ತು ಕೋವಿಡ್ನ ಸಂಭಾವ್ಯ ಪರೋಕ್ಷ ಪರಿಣಾಮಗಳಿಂದ ಉಂಟಾದ ಸಾವುಗಳು ಸೇರಿವೆ.
2020ರಲ್ಲಿ ಕೋವಿಡ್ ಸಾಂಕ್ರಾಮಿಕವು ಭುಗಿಲೇಳುವ ಮೊದಲಿನ ವರ್ಷಗಳಲ್ಲೂ ಸಿಆರ್ಎಸ್ನಲ್ಲಿ ದಾಖಲಾಗಿರುವ ಸಾವುಗಳ ಸಂಖ್ಯೆ ಕಾಲಾನಂತರದಲ್ಲಿ ಹೆಚ್ಚುತ್ತಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಪ್ರತಿವರ್ಷ ಕಂಡು ಬರುವ ಏರಿಕೆಯು 2016ರಲ್ಲಿ ಶೇ.1.3ರಿಂದ 2019ರಲ್ಲಿ ಶೇ.9.9ರಷ್ಟಿದ್ದು, ವಾರ್ಷಿಕ ಸರಾಸರಿ ಏರಿಕೆ ಶೇ.6.4ರಷ್ಟಿತ್ತು ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದರು.







