ಭಾರತದ ಕಂಪನಿಗಳಿಂದ 6 ತಿಂಗಳಲ್ಲಿ 30 ಶತಕೋಟಿ ಡಾಲರ್ ಬಂಡವಾಳ ಕ್ರೋಢೀಕರಣ
ಮುಂಬೈ: ಪ್ರಸಕ್ತ ವರ್ಷದ ಮೊದಲ ಆರು ತಿಂಗಳ ಅವಧಿಯಲ್ಲಿ ಭಾರತೀಯ ಕಂಪನಿಗಳು ಐಪಿಒ ಮತ್ತು ಎಫ್ಪಿಒ ಮೂಲಕ ದಾಖಲೆ ಪ್ರಮಾಣದ ಅಂದರೆ 29.5 ಶತಕೋಟಿ ಡಾಲರ್ (2.5 ಲಕ್ಷ ಕೋಟಿ ರೂಪಾಯಿ) ಬಂಡವಾಳ ಕ್ರೋಢೀಕರಿಸಿವೆ. ಇದು ಕಳೆದ ವರ್ಷದ ಇದೇ ಅವಧಿಯಲ್ಲಿ ಕ್ರೋಢೀಕರಿಸಿದ ಮೊತ್ತದ ಎರಡು ಪಟ್ಟು ಅಧಿಕ. ಈ ಅವಧಿಯಲ್ಲಿ ಹೊಸ ಐಪಿಓ ಬಿಡುಗಡೆ ಕೂಡ ಶೇಕಡ 64ರಷ್ಟು ಹೆಚ್ಚಿದೆ.
ಈ ಗಣನೀಯ ಹೆಚ್ಚಳಕ್ಕೆ ಈ ವರ್ಷ ಫಾಲೋ ಆನ್ ಪಬ್ಲಿಕ್ ಆಫರ್ (ಎಫ್ಪಿಒ) ಕೊಡುಗೆ ನೀಡಿವೆ. ಈ ವರ್ಷ ಒಟ್ಟು ಸಂಗ್ರಹವಾದ ಮೊತ್ತದ ಶೇಕಡ 85ರಷ್ಟು ಪಾಲು ಎಫ್ಪಿಒಗಳಿಂದ ಬಂದಿದೆ ಎನ್ನುವ ಅಂಶವನ್ನು ಎಲ್ಎಸ್ಇಜಿಯ ಇಂಡಿಯಾ ಇನ್ವೆಸ್ಟ್ಮೆಂಟ್ ಬ್ಯಾಂಕಿಂಗ್ ರಿವ್ಯೂ ಬಹಿರಂಗಪಡಿಸಿದೆ.
ವರ್ಷದ ಮೊದಲ ಆರು ತಿಂಗಳಲ್ಲಿ ಐಪಿಒ ಮೂಲಕ 4.4 ಶತಕೋಟಿ ಬಂಡವಾಳ ಹರಿದುಬಂದಿದ್ದು, ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡ 98ರಷ್ಟು ಅಧಿಕ. ಐಪಿಒಗಳ ಸಂಖ್ಯೆ ಶೇಕಡ 71ರಷ್ಟು ಪ್ರಗತಿ ಕಂಡಿದೆ. ಜಾಗತಿಕ ಐಪಿಒ ಗಾತ್ರದಲ್ಲಿ ಭಾರತ ಶೇಕಡ 27ರಷ್ಟು ಪಾಲು ಹೊಂದಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ ಭಾರತದ ಪಾಲು ಶೇಕಡ 13ರಷ್ಟಾಗಿತ್ತು.
ಎಫ್ಪಿಒ ಮೂಲಕ 25.1 ಶತಕೋಟಿ ಡಾಲರ್ ಬಂಡವಾಳ ಹರಿದು ಬಂದಿದ್ದು, ಇದು ಒಂದು ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ ಶೇಕಡ 156ರಷ್ಟು ಅಧಿಕ. ಎಫ್ಪಿಒಗಳ ಸಂಖ್ಯೆ ಕಳೆದ ವರ್ಷದ ಇದೇ ಅವಧಿಗಿಂತ ಶೇಕಡ 56ರಷ್ಟು ಹೆಚ್ಚಿದೆ.
ಹೊಸ ಷೇರುಗಳ ಅಲೆಯೇ ಹರಿದಿದ್ದರೂ, ಪೂರೈಕೆಗಿಂತ ಅಧಿಕ ಬೇಡಿಕೆ ಕಂಡುಬಂದಿದ್ದು, ಸಾರ್ವತ್ರಿಕ ಚುನಾವಣೆಯ ಫಲಿತಾಂಶದ ಬಳಿಕ ಈ ಪ್ರವೃತ್ತಿ ಮತ್ತಷ್ಟು ಹೆಚ್ಚಿದೆ. ಕಳೆದ ಆರು ತಿಂಗಳಲ್ಲಿ ನಿಫ್ಟಿ ಶೇಕಡ 10ರಷ್ಟು ಪ್ರಗತಿ ಕಂಡಿದೆ.