ಚಿಪ್ ಆಧಾರಿತ ಇ-ಪಾಸ್ಪೋರ್ಟ್ ಪರಿಚಯಿಸಿದ ಭಾರತ; ಇಲ್ಲಿದೆ ಮಾಹಿತಿ

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಗುರುತಿಸುವಿಕೆ ಮತ್ತು ಭದ್ರತೆಯನ್ನು ಹೆಚ್ಚಿಸಲು ಭಾರತೀಯ ಇ-ಪಾಸ್ಪೋರ್ಟ್ನ್ನು ಪರಿಚಯಿಸಲಾಗಿದ್ದು, ಇದು ಅತ್ಯಾಧುನಿಕ ಇಲೆಕ್ಟ್ರಾನಿಕ್ ಪಾಸ್ಪೋರ್ಟ್ ತಂತ್ರಜ್ಞಾನವನ್ನು ಸಾಂಪ್ರದಾಯಿಕ ಕಾಗದದ ಪಾಸ್ಪೋರ್ಟ್ಗಳೊಂದಿಗೆ ಮೇಳೈಸಿದೆ.
ವಿದೇಶಾಂಗ ಸಚಿವಾಲಯದ ವರದಿಯಂತೆ ಎ.1,2024ರಿಂದ ಚಾಲ್ತಿಗೆ ಬಂದಿರುವ ಪಾಸ್ಪೋರ್ಟ್ ಸೇವಾ ಕಾರ್ಯಕ್ರಮ (ಪಿಎಸ್ಪಿ) ಆವೃತ್ತಿ 2.0ರ ಜೊತೆಯಲ್ಲಿ ಪ್ರಾಯೋಗಿಕವಾಗಿ ಇ-ಪಾಸ್ಪೋರ್ಟ್ ಉಪಕ್ರಮವನ್ನೂ ಆರಂಭಿಸಲಾಗಿದೆ.
ಪ್ರಸ್ತುತ ನಾಗ್ಪುರ, ಭುವನೇಶ್ವರ, ಜಮ್ಮು, ಗೋವಾ, ಶಿಮ್ಲಾ, ರಾಯಪುರ, ಅಮೃತಸರ, ಜೈಪುರ, ಚೆನ್ನೈ, ಹೈದರಾಬಾದ್, ಸೂರತ್ ಮತ್ತು ರಾಂಚಿಯಲ್ಲಿಯ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿಗಳು ಇ-ಪಾಸ್ಪೋರ್ಟ್ಗಳನ್ನು ವಿತರಿಸಲು ಸಜ್ಜಾಗಿವೆ. ಈ ಸೌಲಭ್ಯವನ್ನು ಶೀಘ್ರವೇ ಇನ್ನಷ್ಟು ಕಚೇರಿಗಳಿಗೆ ವಿಸ್ತರಿಸಲಾಗುವುದು.
ತಮಿಳುನಾಡಿನಲ್ಲಿ ಮಾ.3,2025ರಿಂದ ಇ-ಪಾಸ್ಪೋರ್ಟ್ಗಳ ವಿತರಣೆ ಆರಂಭಗೊಂಡಿದ್ದು, ಮಾ.22ರ ವೇಳೆಗೆ ಒಟ್ಟು 20,729 ಇ-ಪಾಸ್ಪೋರ್ಟ್ಗಳನ್ನು ವಿತರಿಸಲಾಗಿದೆ.
ಭಾರತದಲ್ಲಿ ಇ-ಪಾಸ್ಪೋರ್ಟ್ಗಳಲ್ಲಿ ಆ್ಯಂಟೆನಾ ಮತ್ತು ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ (ಆರ್ಎಫ್ಐಡಿ) ಚಿಪ್ ಅನ್ನು ಇನ್ಲೇದಲ್ಲಿ ಅಳವಡಿಸಲಾಗಿದೆ. ಮುಂಭಾಗದ ಹೊದಿಕೆಯ ಕೆಳಗೆ ಚಿನ್ನದ ಬಣ್ಣದ ವಿಶಿಷ್ಟ ಚಿಹ್ನೆಯಿಂದಾಗಿ ಇ-ಪಾಸ್ಪೋರ್ಟ್ನ್ನು ಸುಲಭವಾಗಿ ಗುರುತಿಸಬಹುದು.
ಪಬ್ಲಿಕ್ ಕೀ ಇನ್ಫ್ರಾಸ್ಟ್ರಕ್ಚರ್ (ಪಿಕೆಐ) ಒಂದು ಅತ್ಯಗತ್ಯ ಅಂಶವಾಗಿದ್ದು,ಇದು ಖಾಸಗಿ ಡೇಟಾ ರಕ್ಷಣೆಯನ್ನು ಸಾಧ್ಯವಾಗಿಸುತ್ತದೆ ಮತ್ತು ಚಿಪ್ನಲ್ಲಿ ಸಂಗ್ರಹವಾಗಿರುವ ಬಯೊಮೆಟ್ರಿಕ್ ಮತ್ತು ವೈಯಕ್ತಿಕ ಮಾಹಿತಿಯ ನಿಖರತೆ ಮತ್ತು ಕಾನೂನುಬದ್ಧತೆಯನ್ನು ಪರಿಶೀಲಿಸುತ್ತದೆ.
ಸುಧಾರಿತ ದತ್ತಾಂಶ ಸುರಕ್ಷತೆ ಇ-ಪಾಸ್ಪೋರ್ಟ್ನ ಪ್ರಮುಖ ಪ್ರಯೋಜನಗಳಲ್ಲಿ ಒಂದಾಗಿದ್ದು,ಪಾಸ್ಪೋರ್ಟ್ ಹೊಂದಿರುವವರ ಮಾಹಿತಿಯ ಸಮಗ್ರತೆಯ ರಕ್ಷಣೆಯನ್ನು ಖಚಿತಪಡಿಸುತ್ತದೆ ಮತ್ತು ಗಡಿ ತಪಾಸಣೆ ಸಂದರ್ಭದಲ್ಲಿ ನಕಲಿ ಪಾಸ್ಪೋರ್ಟ್ಗಳ ಸೃಷ್ಟಿಯಂತಹ ಫೋರ್ಜರಿ ಮತ್ತು ವಂಚಕ ಚಟುವಟಿಕೆಗಳೊಂದಿಗೆ ಸಂಬಂಧಿಸಿದ ಅಪಾಯಗಳನ್ನು ಕಡಿಮೆ ಮಾಡುತ್ತದೆ.
ಆದರೆ ಈಗಾಗಲೇ ಸಾಮಾನ್ಯ ಪಾಸ್ಪೋರ್ಟ್ಗಳನ್ನು ಹೊಂದಿರುವವರು ಅವುಗಳನ್ನು ಇ-ಪಾಸ್ಪೋರ್ಟ್ಗಳಿಗೆ ಬದಲಿಸುವ ಅಗತ್ಯವಿಲ್ಲ. ಭಾರತ ಸರಕಾರವು ನೀಡಿರುವ ಎಲ್ಲ ಪಾಸ್ಪೋರ್ಟ್ಗಳು ಅವುಗಳ ಅವಧಿ ಮುಗಿಯುವವರೆಗೆ ಮಾನ್ಯವಾಗಿರುತ್ತವೆ.







