ಜಪಾನಿನ ಜಿಡಿಪಿ ಗಾತ್ರವನ್ನು ಭಾರತ ಇನ್ನೂ ಮೀರಿಲ್ಲ: ವರದಿ
ಜಪಾನಿನ ತಲಾ ಆದಾಯವೇ 34,000 ಡಾಲರ್!

ಸಾಂದರ್ಭಿಕ ಚಿತ್ರ | PC : .freepik.com
ಹೊಸದಿಲ್ಲಿ: ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಅವರ ಇತ್ತೀಚಿನ ಹೇಳಿಕೆಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಸಂಭ್ರಮದ ಹೊರತಾಗಿಯೂ ಭಾರತವಿನ್ನೂ ಜಪಾನನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿಲ್ಲ ಎನ್ನುವುದನ್ನು newindianexpress.com ವಿಶ್ಲೇಷಣೆಯು ಬೆಟ್ಟು ಮಾಡಿದೆ.
ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಯ ಇತ್ತೀಚಿನ ಅಂದಾಜುಗಳ ಪ್ರಕಾರ ಭಾರತದ ಜಿಡಿಪಿಯು 2024-25ರ ವಿತ್ತವರ್ಷದ ಅಂತ್ಯದ ವೇಳೆಗೆ 3.9 ಲಕ್ಷ ಕೋಟಿ ಡಾಲರ್ಗಳನ್ನು ತಲುಪುವ ನಿರೀಕ್ಷೆಯಿದೆ.
ಇದು 2024ರ ಕ್ಯಾಲೆಂಡರ್ ವರ್ಷಕ್ಕಾಗಿ ಜಪಾನಿನ ಅಂದಾಜಿತ ಜಿಡಿಪಿ 4.026 ಲಕ್ಷ ಕೋಟಿ ಡಾಲರ್ ಗಿಂತ ಕಡಿಮೆಯಾಗಿದೆ.
ಸುಬ್ರಹ್ಮಣ್ಯಂ ಶನಿವಾರ ಸುದ್ದಿಗೋಷ್ಠಿಯಲ್ಲಿ ‘ಭಾರತೀಯ ಆರ್ಥಿಕತೆಯು ಈಗ ನಾಲ್ಕು ಲಕ್ಷ ಕೋಟಿ ಡಾಲರ್ ಗಳನ್ನು ತಲುಪಿದೆ. ಇದರೊಂದಿಗೆ ನಾವು ಈಗ ಜಪಾನನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿ ದೊಡ್ಡ ಆರ್ಥಿಕತೆಯಾಗಿದ್ದೇವೆ. ಇದನ್ನು ನಾನು ಹೇಳುತ್ತಿಲ್ಲ, ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಯ ದತ್ತಾಂಶಗಳು ಇದನ್ನು ಹೇಳಿವೆ. ಅಮೆರಿಕ,ಚೀನಾ ಮತ್ತು ಜರ್ಮನಿ ಮಾತ್ರ ನಮಗಿಂತ ದೊಡ್ಡ ಆರ್ಥಿಕತೆಗಳಾಗಿವೆ’ ಎಂದು ಪ್ರಕಟಿಸಿದ ಬಳಿಕ ಗೊಂದಲ ಆರಂಭಗೊಂಡಿತು. ಈ ಹೇಳಿಕೆ ತ್ವರಿತವಾಗಿ ವೈರಲ್ ಆಗಿ ಸಾಮಾಜಿಕ ಮಾಧ್ಯಮಗಳಲ್ಲಿ ಸಂಭ್ರಮಾಚರಣೆಗೆ ಕಾರಣವಾಗಿತ್ತು.
ಐಎಂಎಫ್ ದತ್ತಾಂಶಗಳು ಈವರೆಗೆ ಸುಬ್ರಹ್ಮಣ್ಯಂ ಹೇಳಿಕೆಯನ್ನು ಬೆಂಬಲಿಸಿಲ್ಲ.
ಐಎಂಎಫ್ ಪ್ರಕಾರ ಭಾರತವು ವಿತ್ತವರ್ಷ 26ರ ಅಂತ್ಯದಲ್ಲಷ್ಟೇ ಜಿಡಿಪಿ ಗಾತ್ರದಲ್ಲಿ ಜಪಾನನ್ನು ಮೀರಿಸುವ ನಿರೀಕ್ಷೆಯಿದ್ದು,ಆ ವೇಳೆ ಭಾರತದ ಜಿಡಿಪಿ 4.187 ಲಕ್ಷ ಕೋಟಿ ಡಾಲರ್ ಗಳನ್ನು ತಲುಪಲಿದೆ ಎಂದು ಅಂದಾಜಿಸಲಾಗಿದೆ. ಇದು ಜಪಾನಿನ ನಿರೀಕ್ಷಿತ ಜಿಡಿಪಿ 4.186 ಲಕ್ಷ ಕೋಟಿ ರೂ.ಗಿಂತ ಕೊಂಚ ಹೆಚ್ಚು. ಗಮನಾರ್ಹವಾಗಿ ಐಎಂಎಫ್ ಭಾರತದ ವಿತ್ತವರ್ಷ(ಎಪ್ರಿಲ್-ಮಾರ್ಚ್)ವನ್ನು ಕ್ಯಾಲೆಂಡರ್ ವರ್ಷವೆಂದು ಪರಿಗಣಿಸಿದ್ದು,ಇದು ತಪ್ಪು ತಿಳುವಳಿಕೆಗೆ ಕಾರಣವಾಗಿರುವಂತಿದೆ.
ಐಎಂಎಫ್ ಮತ್ತು ಭಾರತದ ವಿತ್ತವರ್ಷಗಳ ನಡುವಿನ ವ್ಯತ್ಯಾಸ ಈ ಅಸ್ಪಷ್ಟತೆಯನ್ನು ಇನ್ನಷ್ಟು ಹೆಚ್ಚಿಸಿದೆ. ಐಎಂಎಫ್ ವಿತ್ತವರ್ಷ 2024-25ನ್ನು ವಿತ್ತವರ್ಷ 24 ಎಂದು ತೋರಿಸಿದರೆ ಭಾರತದ ವಿತ್ತವರ್ಷ 2024-25ನ್ನು ವಿತ್ತವರ್ಷ 25 ಎಂದು ಬರೆಯಲಾಗುತ್ತದೆ. ಈ ತಪ್ಪು ಹೊಂದಾಣಿಕೆಯು ಐಎಂಎಫ್ನ 2025ರ ಅಂದಾಜುಗಳನ್ನು ಪ್ರಸ್ತುತ ದತ್ತಾಂಶಗಳೆಂದು ತಪ್ಪಾಗಿ ಅರ್ಥೈಸಿಕೊಳ್ಳಲು ಕಾರಣವಾಗಿರಬಹುದು.
ಹೇಳಿಕೆಯ ಕುರಿತು ಸ್ಪಷ್ಟನೆಯನ್ನು ಕೋರಿ ಸುದ್ದಿಸಂಸ್ಥೆಯು ನೀತಿ ಆಯೋಗವನ್ನು ಸಂಪರ್ಕಿಸಿತ್ತಾದರೂ ಅದಿನ್ನೂ ಪ್ರತಿಕ್ರಿಯಿಸಿಲ್ಲ. ಈ ನಡುವೆ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ತನ್ನ ಮೊದಲ ಮುಂಗಡ ಅಂದಾಜಿನಲ್ಲಿ ವಿತ್ತವರ್ಷ 25ರಲ್ಲಿ ಭಾರತದ ನಾಮಿನಲ್(ನಾಮಮಾತ್ರ) ಜಿಡಿಪಿಯನ್ನು 324 ಲಕ್ಷ ಕೋಟಿ ರೂ.ಗಳಿಗೆ ನಿಗದಿಗೊಳಿಸಿದೆ. ಪ್ರತಿ ಡಾಲರ್ ಗೆ 84 ರೂ.ಸರಾಸರಿ ವಿನಿಮಯ ದರ ಎಂದು ಪರಿಗಣಿಸಿದರೆ ಇದು ಸುಮಾರು 3.85 ಲಕ್ಷ ಕೋಟಿ ಡಾಲರ್ ಆಗುತ್ತದೆ, ಅಂದರೆ ಜಪಾನಿಗಿಂತ ಇನ್ನೂ ಕಡಿಮೆಯೇ ಆಗಿರಲಿದೆ. ಸಚಿವಾಲಯವು ಮೇ 30,2025ರಂದು ನಾಲ್ಕನೇ ತ್ರೈಮಾಸಿಕದ ಜಿಡಿಪಿ ಡೇಟಾವನ್ನು ಬಿಡುಗಡೆಗೊಳಿಸಲಿದ್ದು, ಆಗ ಸ್ಪಷ್ಟ ಚಿತ್ರಣ ಹೊರಹೊಮ್ಮಲಿದೆ.
ಭಾರತವು ಅಧಿಕೃತವಾಗಿ ಜಪಾನನ್ನು ಹಿಂದಿಕ್ಕಿದರೂ ಅದನ್ನು ಅತಿಯಾಗಿ ಸಂಭ್ರಮಿಸುವಾಗ ಎಚ್ಚರಿಕೆ ಅಗತ್ಯ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ಜಿಡಿಪಿ ಗಾತ್ರದಲ್ಲಿ ಸಂಭವನೀಯ ಮೀರಿಸುವಿಕೆಯ ಹೊರತಾಗಿಯೂ ಭಾರತದ ತಲಾ ಆದಾಯವು ಜಪಾನಿನ 34,000 ಡಾಲರ್ ಗಳಿಗೆ ಹೋಲಿಸಿದರೆ ಗಣನೀಯವಾಗಿ ಕಡಿಮೆಯಿದೆ. ಭಾರತದ ತಲಾ ಆದಾಯ ಸುಮಾರು 2,900 ಡಾ.ಲರ್ ನಷ್ಟಿರಲಿದೆ. ಇದು ಜೀವನ ಮಟ್ಟಗಳು ಮತ್ತು ಆರ್ಥಿಕ ಪ್ರಬುದ್ಧತೆಯಲ್ಲಿನ ವ್ಯಾಪಕ ಅಂತರವನ್ನು ಎತ್ತಿ ತೋರಿಸುತ್ತದೆ.







