ಇರಾನ್ ದಾಳಿಗೆ ಅಮೆರಿಕ ವಿಮಾನಗಳು ಭಾರತೀಯ ವಾಯುಪ್ರದೇಶ ಬಳಸಿಲ್ಲ: ಭಾರತ

Photo | BBC
ಹೊಸದಿಲ್ಲಿ: ಇರಾನ್ ವಿರುದ್ಧ ದಾಳಿ ನಡೆಸಲು ಅಮೆರಿಕದ ಯುದ್ಧ ವಿಮಾನಗಳು ಭಾರತೀಯ ವಾಯುಪ್ರದೇಶವನ್ನು ಬಳಸಿವೆ ಎಂಬುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿರುವ ಸುದ್ದಿಯನ್ನು ಭಾರತ ನಿರಾಕರಿಸಿದೆ.
ಇರಾನ್ ನ ಮೂರು ಪರಮಾಣು ಸ್ಥಳಗಳ ಮೇಲೆ ಅಮೆರಿಕದ ಯುದ್ಧ ವಿಮಾನಗಳು ರವಿವಾರ ಮುಂಜಾನೆ ದಾಳಿ ನಡೆಸಿವೆ ಹಾಗೂ ಇರಾನ್ ಇದಕ್ಕೆ ಪ್ರತೀಕಾರ ಸಾಧಿಸಿದರೆ ಮತ್ತಷ್ಟು ದಾಳಿ ನಡೆಸುವ ಬೆದರಿಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಕಿದ್ದಾರೆ.
‘‘‘ಆಪರೇಶನ್ ಮಿಡ್ನೈಟ್ ಹ್ಯಾಮರ್’ ವೇಳೆ ಇರಾನ್ ವಿರುದ್ಧ ಬಾಂಬ್ ದಾಳಿ ನಡೆಸಲು ಅಮೆರಿಕದ ಯುದ್ಧ ವಿಮಾನಗಳು ಭಾರತೀಯ ವಾಯುಪ್ರದೇಶವನ್ನು ಬಳಸಿವೆ ಎಂಬುದಾಗಿ ಹಲವು ಸಾಮಾಜಿಕ ಮಾಧ್ಯಮ ಖಾತೆಗಳು ಹೇಳಿಕೊಂಡಿವೆ. ಈ ಹೇಳಿಕೆ ಸುಳ್ಳು’’ ಎಂಬುದಾಗಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹಾಕಿದ ಹೇಳಿಕೆಯೊಂದರಲ್ಲಿ ಪತ್ರಿಕಾ ಮಾಹಿತಿ ಸಂಸ್ಥೆಯ ವಾಸ್ತವಾಂಶ ಪತ್ತೆ ಘಟಕ (ಪಿಐಬಿ ಫ್ಯಾಕ್ಟ್ ಚೆಕ್) ಹೇಳಿದೆ.
‘‘‘ಆಪರೇಶನ್ ಮಿಡ್ನೈಟ್ ಹ್ಯಾಮರ್’ ಕಾರ್ಯಾಚರಣೆಯ ವೇಳೆ ಅಮೆರಿಕವು ಭಾರತೀಯ ವಾಯುಪ್ರದೇಶವನ್ನು ಬಳಸಿಲ್ಲ’’ ಎಂದು ಅದು ತಿಳಿಸಿದೆ.
ಅಮೆರಿಕದ ಯುದ್ಧವಿಮಾನಗಳು ಬಳಸಿದ ಮಾರ್ಗದ ಬಗ್ಗೆ ಪತ್ರಿಕಾಗೋಷ್ಠಿಯೊಂದರಲ್ಲಿ ಅಮೆರಿಕದ ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಡ್ಯಾನ್ ಕೇನ್ ವಿವರಗಳನ್ನು ನೀಡಿದ್ದಾರೆ ಎಂದು ಅದು ಹೇಳಿದೆ.