ಕಾಶ್ಮೀರ ಸಮಸ್ಯೆ ಪರಿಹರಿಸಲು ಭಾರತಕ್ಕೆ ಮೂರನೆಯವರ ಮಧ್ಯಸ್ಥಿಕೆಯ ಅಗತ್ಯವಿಲ್ಲ: ಅಮೆರಿಕ ಅಧ್ಯಕ್ಷ ಟ್ರಂಪ್ ಗೆ ತಿಳಿಸಿದ ಪ್ರಧಾನಿ ಮೋದಿ

PC : NDTV
ಹೊಸದಿಲ್ಲಿ: ಪಾಕಿಸ್ತಾನದೊಂದಿಗಿನ ಜಮ್ಮು ಮತ್ತು ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲು ಭಾರತಕ್ಕೆ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯ ಅಗತ್ಯವಿಲ್ಲ. ಅದನ್ನು ಭಾರತವು ಬಯಸುವುದೂ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ತಿಳಿಸಿದ್ದಾರೆ.
ಪಹಲ್ಗಾಮ್ ನಲ್ಲಿ ಭಯೋತ್ಪಾದಕರ ದಾಳಿಯ ನಂತರ ಸುಮಾರು 100 ಗಂಟೆಗಳ ಕಾಲ ನಡೆದ 'ಆಪರೇಷನ್ ಸಿಂಧೂರ್' ಸಮಯದಲ್ಲಿ ಕದನ ವಿರಾಮ ಮಾಡುವಂತೆ ಕೇಳಿಕೊಂಡಿದ್ದು ಪಾಕಿಸ್ತಾನವೇ ಹೊರತು ಭಾರತವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಜಿ7 ಶೃಂಗಸಭೆಗಾಗಿ ಕೆನಡಾದಲ್ಲಿರುವಾಗ ಪ್ರಧಾನಿ ಮೋದಿ ಅವರು ಈ ಬಲವಾದ ಸಂದೇಶಗಳನ್ನು ನೀಡಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಬುಧವಾರ ಬೆಳಿಗ್ಗೆ ಹೇಳಿದರು.
ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಕದನ ವಿರಾಮ ಘೋಷಿಸುವಂತೆ ಮಧ್ಯಸ್ಥಿಕೆ ವಹಿಸಿದ್ದು ನಾನು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳುತ್ತಲೇ ಬಂದಿದ್ದರು. ಈಗ ಉಲ್ಬಣವಾಗಿರುವ ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನ ಪರಿಸ್ಥಿತಿಯ ನಡುವೆ ಹೇಳಿಕೆ ನೀಡುವಾಗ ಅವರು ಮತ್ತೆ ಭಾರತ ಪಾಕ್ ಕದನ ವಿರಾಮ ಮಾಡಿಸಿದಂತೆಯೇ ಇದನ್ನೂ ಮಾಡಬಲ್ಲೆ ಎಂದು ಉಲ್ಲೇಖಿಸಿದ್ದು ಮುನ್ನೆಲೆಗೆ ಬಂದಿತ್ತು.
ವಿಪಕ್ಷಗಳು ಟ್ರಂಪ್ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡುವಂತೆ ಪ್ರಧಾನಿ ಮೋದಿ ಅವರಲ್ಲಿ ಆರಂಭದಿಂದಲೂ ಆಗ್ರಹಿಸುತ್ತಿದ್ದವು.







