ಮೇ ಅಂತ್ಯದೊಳಗೆ ಸೇನಾ ಪಡೆ ಹಿಂಪಡೆಯಲು ಭಾರತ, ಪಾಕಿಸ್ತಾನ ಒಪ್ಪಿಗೆ: ಭದ್ರತಾ ಅಧಿಕಾರಿ

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಇತ್ತೀಚೆಗೆ ನಡೆದ ಸೇನಾ ಸಂಘರ್ಷದ ಸಂದರ್ಭ ನಿಯೋಜಿಸಲಾಗಿದ್ದ ಸೇನಾ ಪಡೆಗಳನ್ನು ಮೇ ಅಂತ್ಯದ ಒಳಗೆ ಹಿಂಪಡೆಯಲು ಪಾಕಿಸ್ತಾನ ಹಾಗೂ ಭಾರತ ಒಪ್ಪಿಕೊಂಡಿವೆ ಎಂದು ಪಾಕಿಸ್ತಾನದ ಹಿರಿಯ ಭದ್ರತಾ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಕಳೆದ ತಿಂಗಳು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದರು. ಈ ದಾಳಿ ನಡೆಸಲು ಉಗ್ರರಿಗೆ ಪಾಕಿಸ್ತಾನ ಬೆಂಬಲ ನೀಡಿದೆ ಎಂದು ಭಾರತ ಆರೋಪಿಸಿತ್ತು. ಆದರೆ, ಇದನ್ನು ಪಾಕಿಸ್ತಾನ ನಿರಾಕರಿಸಿತ್ತು. ಅನಂತರ ಭಾರತದ ಸೇನಾ ಪಡೆಗಳು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಡೆಸಿತ್ತು. ಈ ಸಂದರ್ಭ ನಡೆದ ಸೇನಾ ಸಂಘರ್ಷದಲ್ಲಿ 70ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು.
‘‘ಮಾರ್ಚ್ ಅಂತ್ಯದ ಒಳಗೆ ಪಡೆಗಳನ್ನು ಹಿಂದೆ ಕರೆಸಿಕೊಳ್ಳಲಾಗುವುದು’’ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೆಚ್ಚಾಗಿ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ನಿಯೋಜಿಸಲಾಗಿರುವ ಹೆಚ್ಚುವರಿ ಪಡೆ ಹಾಗೂ ಶಸ್ತ್ರಾಸ್ತ್ರಗಳನ್ನು ಹಂತ ಹಂತವಾಗಿ ಹಿಂದೆ ಹಿಂಪಡೆಯಲು ಉಭಯ ದೇಶಗಳು ಒಪ್ಪಿಕೊಂಡಿವೆ ಎಂದು ಅವರು ತಿಳಿಸಿದ್ದಾರೆ.
ಗಡಿ ಹಾಗೂ ಮುಂಚೂಣಿ ಪ್ರದೇಶಗಳಲ್ಲಿ ಪಡೆಗಳನ್ನು ಕಡಿಮೆ ಮಾಡಲು ತತ್ಕ್ಷಣ ಕ್ರಮ ತೆಗೆದುಕೊಳ್ಳಲು ಉಭಯ ದೇಶಗಳು ಒಪ್ಪಿಕೊಂಡಿವೆ ಎಂದು ಭಾರತೀಯ ಸೇನೆ ಕಳೆದ ವಾರ ಹೇಳಿದ ಬಳಿಕ ಈ ಬೆಳವಣಿಗೆ ನಡೆದಿದೆ.
ಈ ಎಲ್ಲಾ ಕ್ರಮಗಳನ್ನು 10 ದಿನಗಳ ಒಳಗೆ ಪೂರ್ಣಗೊಳಿಸಬೇಕು ಎಂದು ಆರಂಭದಲ್ಲಿ ಯೋಜಿಸಲಾಗಿತ್ತು. ಆದರೆ, ಸಣ್ಣ ಸಮಸ್ಯೆ ವಿಳಂಬಕ್ಕೆ ಕಾರಣವಾಯಿತು ಎಂದು ಪಾಕಿಸ್ತಾನದ ಅಧಿಕಾರಿ ತಿಳಿಸಿದ್ದಾರೆ.







