ಭಾರತ- ಪಾಕ್ ಸಂಘರ್ಷ: ಇಂದು ಡಿಜಿಎಂಒ ಮಟ್ಟದ ಮಾತುಕತೆ

PC | hindustantimes
ಹೊಸದಿಲ್ಲಿ: ಭಾರತ- ಪಾಕಿಸ್ತಾನ ಸಂಘರ್ಷ ಮತ್ತು ಕದನ ವಿರಾಮದ ಬಳಿಕ ಇದೇ ಮೊದಲ ಬಾರಿಗೆ ಉಭಯ ದೇಶಗಳ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರ (ಡಿಜಿಎಂಒ) ಮಟ್ಟದ ಮಾತುಕತೆ ಸೋಮವಾರ ಮಧ್ಯಾಹ್ನ 12 ಗಂಟೆಗೆ ನಿಗದಿಯಾಗಿದೆ ಎಂದು ಭಾರತದ ಡಿಜಿಎಂಓ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಪ್ರಕಟಿಸಿದ್ದಾರೆ. ನೌಕಾ ಕಾರ್ಯಾಚರಣೆಗಳ ಮಹಾನಿರ್ದೇಶಕ ವೈಸ್ ಅಡ್ಮಿರಲ್ ಎ.ಎನ್.ಪ್ರಮೋದ್ ಮತ್ತು ವಾಯು ಕಾರ್ಯಾಚರಣೆಗಳ ಮಹಾನಿರ್ದೇಶಕ ಏರ್ ಮಾರ್ಷಲ್ ಎ.ಕೆ.ಭಾರ್ತಿ ಅವರು ಕೂಡಾ ಜಂಟಿ ಪತ್ರಿಕಾಗೋಷ್ಠಿಯಲ್ಲಿದ್ದರು.
ಆಪರೇಷನ್ ಸಿಂಧೂರ ಬಗ್ಗೆ ಸಮಗ್ರ ಮಾಹಿತಿಗಳನ್ನು ಮಾಧ್ಯಮಗಳ ಜತೆ ಹಂಚಿಕೊಳ್ಳುವ ಸಂದರ್ಭದಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ. ಭಾರತದ ಕಾರ್ಯಾಚರಣೆಯಲ್ಲಿ ಯೂಸಫ್ ಅಝರ್, ಅಬ್ದುಲ್ ಮಲಿಕ್ ರವೂಫ್ ಮತ್ತು ಮುದಾಸಿರ್ ಅಹ್ಮದ್ ಸೇರಿದಂತೆ 100ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ. ಆರ್ಟಿಲರಿ ಮತ್ತು ಶೆಲ್ ಚಕಮಕಿಯಲ್ಲಿ ಪಾಕಿಸ್ತಾನ ಸೇನೆಯ 35-40 ಸೈನಿಕರು ಮೃತಪಟ್ಟಿದ್ದಾರೆ ಎಂದು ವಿವರಿಸಿದರು.
ಪಾಕಿಸ್ತಾನದ ಒಳಗೆ 11 ವಾಯುನೆಲೆಗಳು ನಾಶವಾಗಿವೆ ಮತ್ತು ಆ ದೇಶದ ಮಿಲಿಟರಿ ಸಾಮಥ್ರ್ಯಕ್ಕೆ ವ್ಯಾಪಕ ಹಾನಿಯಾಗಿದೆ ಎಂದು ದೃಢಪಡಿಸಿದರು. ಶನಿವಾರ ಕದನ ವಿರಾಮ ಘೋಷಣೆಯಾದ ಬಳಿಕವೂ ಪಾಕಿಸ್ತಾನ ಹಲವು ಬಾರಿ ಇದನ್ನು ಉಲ್ಲಂಘಿಸಿದೆ. ಶನಿವಾರ ರಾತ್ರಿ ಜಮ್ಮು ಪ್ರದೇಶದಲ್ಲಿ ಡ್ರೋನ್ಗಳು ಪತ್ತೆಯಾಗಿದ್ದು, ದೊಡ್ಡ ಸ್ಫೋಟದ ಸದ್ದು ಕೇಳಿಬಂದಿದೆ ಎಂದು ತಿಳಿಸಿದರು.





