ಭಾರತ-ಪಾಕಿಸ್ತಾನ ಉದ್ವಿಗ್ನತೆ | ಟರ್ಕಿಗೆ ಇನ್ನೊಂದು ಹೊಡೆತ: ಸೇಬು ಆಮದು ನಿಲ್ಲಿಸಲು ದಿಲ್ಲಿಯ ಹಣ್ಣಿನ ವ್ಯಾಪಾರಿಗಳ ನಿರ್ಧಾರ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಇತ್ತೀಚಿನ ಸಂಘರ್ಷದಲ್ಲಿ ಭಾರತದ ವಿರುದ್ಧ ಪಾಕಿಸ್ತಾನವನ್ನು ಬೆಂಬಲಿಸಿದ್ದ ಟರ್ಕಿಗೆ ಇನ್ನೊಂದು ಆಘಾತ ಎದುರಾಗಿದೆ. ಏಶ್ಯಾದ ಅತಿ ದೊಡ್ಡ ಹಣ್ಣುಹಂಪಲಗಳು ಮತ್ತು ತರಕಾರಿಗಳ ಸಗಟು ಮಾರುಕಟ್ಟೆಯಾಗಿರುವ ದಿಲ್ಲಿಯ ಆಝಾದ್ ಪುರ ಮಂಡಿಯು ಪ್ರಸ್ತುತ ರಾಜತಾಂತ್ರಿಕ ಪರಿಸ್ಥಿತಿಯನ್ನು ಉಲ್ಲೇಖಿಸಿ ಟರ್ಕಿಯಿಂದ ಸೇಬುಗಳ ಆಮದನ್ನು ನಿಲ್ಲಿಸಲು ನಿರ್ಧರಿಸಿದೆ.
‘ಟರ್ಕಿಯಿಂದ ಸೇಬುಗಳ ಎಲ್ಲ ಹೊಸ ಆಮದುಗಳನ್ನು ನಿಲ್ಲಿಸಲು ನಾವು ನಿರ್ಧರಿಸಿದ್ದೇವೆ. ಮೊದಲೇ ಆರ್ಡರ್ ಮಾಡಿರುವ ಸರಕುಗಳು ಬರುತ್ತವೆ, ಆದರೆ ಹೊಸದಾಗಿ ಆ ದೇಶದಿಂದ ಸೇಬುಗಳು ಮತ್ತು ಇತರ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲಾಗುವುದಿಲ್ಲ’ ಎಂದು ತಿಳಿಸಿದ ಆಝಾದ್ಪುರ ಹಣ್ಣುಗಳ ಮಂಡಿಯ ಅಧ್ಯಕ್ಷ ಮೀಠಾರಾಮ ಕೃಪಲಾನಿಯವರು, ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ಪರಿಶೀಲಿಸಿದ ಬಳಿಕ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಭವಿಷ್ಯದಲ್ಲಿ ಯಾವುದೇ ಹೊಸ ಆರ್ಡರ್ಗಳನ್ನು ಸಲ್ಲಿಸಲಾಗುವುದಿಲ್ಲ ಎಂದು ಹೇಳಿದರು.
ಕೃಪಲಾನಿಯವರ ಪ್ರಕಾರ ಆಝಾದ್ಪುರ ಮಂಡಿಯು ಬಹಳ ಹಿಂದಿನಿಂದಲೂ ಟರ್ಕಿಯ ಸೇಬುಗಳಿಗೆ ಆದ್ಯತೆ ನೀಡಿದ್ದು, 2024ರಲ್ಲಿ ಆಮದು ಪ್ರಮಾಣ 1.16 ಲ.ಟನ್ಗಳನ್ನು ತಲುಪಿತ್ತು.
‘ಭಾರತದ ಬಗ್ಗೆ ಟರ್ಕಿಯ ನಿಲುವಿನಲ್ಲಿಯ ಇತ್ತೀಚಿನ ಬೆಳವಣಿಗೆಗಳು ನಿರಾಸೆಯನ್ನುಂಟು ಮಾಡಿವೆ. ವರ್ಷಗಳಿಂದಲೂ ನಾವು ಟರ್ಕಿಯೊಂದಿಗೆ ವ್ಯಾಪಾರವನ್ನು ಬೆಂಬಲಿಸಿದ್ದೆವು, ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ನಮಗೆ ಬೇರೆ ಯಾವುದೇ ಆಯ್ಕೆಯಿಲ್ಲ’ ಎಂದು ಕೃಪಲಾನಿ ಹೇಳಿದರು.
‘ನಮ್ಮ ನಿರ್ಧಾರವು ಮಂಡಿಯ ಖರೀದಿ ಕಾರ್ಯತಂತ್ರದಲ್ಲಿ ಗಮನಾರ್ಹ ಬೆಳವಣಿಗೆಯನ್ನು ಸೂಚಿಸುತ್ತದೆ, ಮುಂಬರುವ ತಿಂಗಳುಗಳಲ್ಲಿ ಸೇಬುಗಳನ್ನು ಆಮದು ಮಾಡಿಕೊಳ್ಳಲು ಪರ್ಯಾಯ ಪೂರೈಕೆದಾರರನ್ನು ಅನ್ವೇಷಿಸಲು ಅದು ಯೋಜಿಸಿದೆ ’ಎಂದೂ ಅವರು ತಿಳಿಸಿದರು.
ಟರ್ಕಿಯ ಸರಕುಗಳ ಆಮದು ಮತ್ತು ಮಾರಾಟವನ್ನು ನಿಷೇಧಿಸುವಂತೆ ದಿಲ್ಲಿಯಾದ್ಯಂತ ವ್ಯಾಪಾರಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಭಾರತದ ಬಗ್ಗೆ ಟರ್ಕಿಯ ಇತ್ತೀಚಿನ ರಾಜಕೀಯ ನಿಲುವು ಸ್ವೀಕಾರಾರ್ಹವಲ್ಲ ಮತ್ತು ರಾಷ್ಟ್ರೀಯ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದೆ ಎಂದು ದಿಲ್ಲಿಯ ವ್ಯಾಪಾರಿಗಳ ಸಂಘಗಳು ಪ್ರತಿಪಾದಿಸಿವೆ.







