ಭಾರತ-ಪಾಕಿಸ್ತಾನ ಉದ್ವಿಗ್ನತೆ | ಇತ್ತೀಚಿನ ಬೆಳವಣಿಗೆಗಳನ್ನು ಸಂಸದೀಯ ಸಮಿತಿಗೆ ವಿವರಿಸಲಿರುವ ವಿದೇಶಾಂಗ ಕಾರ್ಯದರ್ಶಿ

ವಿಕ್ರಮ್ ಮಿಸ್ರಿ | PTI
ಹೊಸದಿಲ್ಲಿ: ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಇತ್ತೀಚಿನ ಬೆಣವಣಿಗೆಗಳ ಕುರಿತು ಮೇ 19ರಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಸಂಸದ ಶಶಿ ತರೂರ್ ನೇತೃತ್ವದ ವಿದೇಶಾಂಗ ವ್ಯವಹಾರಗಳ ಕುರಿತು ಸಂಸದೀಯ ಸ್ಥಾಯಿ ಸಮಿತಿಗೆ ವಿವರಗಳನ್ನು ಒದಗಿಸಲಿದ್ದಾರೆ.
ತರೂರ್ ಪ್ರಕಾರ ಮಿಸ್ರಿ ಅವರು ಗಡಿಯಾಚೆಯ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ಭಾರತದ ದಾಳಿಗಳು ಸೇರಿದಂತೆ ಇತ್ತೀಚಿನ ಬೆಳವಣಿಗೆಗಳ ಸಮಗ್ರ ಮಾಹಿತಿಯನ್ನು ಒದಗಿಸಲಿದ್ದಾರೆ. ಉಭಯ ದೇಶಗಳು ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿವೆಯಾದರೂ ಪರಿಸ್ಥಿತಿ ಈಗಲೂ ನಾಜೂಕಾಗಿಯೇ ಇದೆ.
ಅನುಭವಿ ರಾಜತಾಂತ್ರಿಕ ಮತ್ತು ಚೀನಾಕ್ಕೆ ಮಾಜಿ ರಾಯಭಾರಿ ಮಿಸ್ರಿ ಅವರು ಪ್ರಮುಖ ವಿದೇಶಾಂಗ ನೀತಿ ಬೆಳವಣಿಗೆಗಳ ಕುರಿತು ಸಮಿತಿಗೆ ನಿಯಮಿತವಾಗಿ ಮಾಹಿತಿಗಳನ್ನು ನೀಡುತ್ತಿದ್ದಾರೆ. ಈ ಹಿಂದೆ ಬಾಂಗ್ಲಾದೇಶದೊಂದಿಗಿನ ಭಾರತದ ಸಂಬಂಧಗಳು ಮತ್ತು ಇತ್ತೀಚಿನ ಕೆನಡಾದೊಂದಿಗಿನ ರಾಜತಾಂತ್ರಿಕ ಬಿಕ್ಕಟ್ಟು ಸೇರಿದಂತೆ ಪಾಶ್ಚಾತ್ಯ ದೇಶಗಳೊಂದಿಗೆ ಸಮಸ್ಯೆಗಳ ಕುರಿತೂ ಅವರು ಸಮಿತಿಯ ಸದಸ್ಯರಿಗೆ ವಿವರಗಳನ್ನು ಒದಗಿಸಿದ್ದರು.





