ಸಂಸದರ ಅಮಾನತು ವಿರುದ್ಧ ಸಂಸತ್ ಸಂಕೀರ್ಣದಲ್ಲಿ ‘ಇಂಡಿಯಾ’ ಪ್ರತಿಭಟನೆ

Photo : PTI
ಹೊಸದಿಲ್ಲಿ: ಸಂಸತ್ ನಿಂದ 14 ಮಂದಿ ಸಂಸದರನ್ನು ಅಮಾನತುಗೊಳಿಸಿರುವುದನ್ನು ಖಂಡಿಸಿ ಪ್ರತಿಪಕ್ಷ ಇಂಡಿಯಾ ಮೈತ್ರಿಕೂಟದ ನಾಯಕರು ಶುಕ್ರವಾರ ಸಂಸತ್ ಭವನದ ಸಂಕೀರ್ಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಲೋಕಸಭೆಯಿಂದ ಕಾಂಗ್ರೆಸ್ ಪಕ್ಷದ 9 ಮಂದಿ ಸಂಸದರು ಹಾಗೂ ಡಿಎಂಕೆ ಪಕ್ಷದ ಕನಿಮೋಳಿ ಸೇರಿದಂತೆ 13 ಮಂದಿಯನ್ನು ಹಾಗೂ ರಾಜ್ಯಸಭೆಯಲ್ಲಿ ‘ಅಶಿಸ್ತಿನ ವರ್ತನೆ’ಗಾಗಿ ಟಿಎಂಸಿ ನಾಯಕ ಡೆರೆಕ್ ಓಬ್ರಿಯಾನ್ ಅವರನ್ನು ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಲಾಗಿದೆ.
ಸಂಸತ್ ಭವನದಲ್ಲಿ ಬುಧವಾರ ನಡೆದ ಭಾರೀ ಭದ್ರತಾ ಉಲ್ಲಂಘನೆಯ ಘಟನೆಗೆ ಸಂಬಂಧಿಸಿ ಚರ್ಚೆಗೆ ಆಗ್ರಹಿಸಿ ಲೋಕಸಭೆಯಲ್ಲಿ ಗದ್ದಲವೆಬ್ಪಿಸಿದ್ದಕಾಗಿ ಈ ಸದಸ್ಯರನ್ನು ಅಮಾನತುಗೊಳಿಸಲಾಗಿದೆ.
‘ಮೌನ ಪ್ರತಿಭಟನೆ’ಎಂದು ಬರೆಯಲಾಗಿದ್ದ ಟಿ-ಶರ್ಟ್ ಧರಿಸಿದ್ದ ಓಬ್ರಿಯಾನ್ ಅವರು ಪ್ರತಿಪಕ್ಷಗಳ ಸಂಸದರೊಂದಿಗೆ ಧರಣಿಯಲ್ಲಿ ಪಾಲ್ಗೊಂಡರು. ಕಾಂಗ್ರೆಸ್ ನ ಮಾಜಿ ಅಧ್ಯಕ್ಷೆ ಸೋನಿಯಾಗಾಂಧಿ ಕೂಡಾ ಧರಣಿಯಲ್ಲಿ ಪ್ರತಿಪಕ್ಷ ನಾಯಕರೊಂದಿಗೆ ಭಾಗವಹಿಸಿದರು.
ಲೋಕಸಭೆಯಲ್ಲಿ ಸಂದರ್ಶಕರ ಪಾಸ್ ಗಳನ್ನು ಒದಗಿಸಿದ್ದ ಮೈಸೂರಿನ ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳುವಂತೆ ಹಾಗೂ 14 ಮಂದಿ ಸಂಸದರ ಅಮಾನತು ಆದೇಶವನ್ನು ಹಿಂತೆಗೆಯಬೇಕೆಂದು ಪ್ರತಿಭಟನಕಾರರು ಆಗ್ರಹಿಸಿ ಧರಣಿ ನಡೆಸುತ್ತಿದ್ದಾರೆ.
ಸಂಸತ್ತಿಲ್ಲಿ ಹೊಗೆ ಬಾಂಬ್ ಡಿಸಲು ಅವಕಾಶ ಮಾಡಿಕೊಟ್ಟ ಅಪರಾಧಿ ಬಿಜೆಪಿ ಸಂಸದ ಸ್ವಚ್ಛಂದವಾಗಿ ತಿರುಗಾಡುತ್ತಿದ್ದರೆ, ತಾವು ಆ ಬಗ್ಗೆ ಮಾತನಾಡಿದ್ದಕ್ಕೆ ತಮ್ಮನ್ನು ಅಮಾನತು ಗೊಳಿಸಲಾಗಿದೆ ಎಂಬ ಬರಹಗಳಿರುವ ಫಲಕಗಳನ್ನು ಪ್ರತಿಭಟನಕಾರರು ಹಿಡಿದಿದ್ದರು.
‘‘ಅಮಾನತು ಹಾಗೂ ಉಚ್ಚಾಟನೆಯು ಈ ಸರಕಾರಕ್ಕೆ ಹೊಸದೇನಲ್ಲ. ಕಳೆದ ವಾರ ಮಹುವಾ ಮೊಯಿತ್ರಾ ಅವರನ್ನು ಉಚ್ಚಾಟಿಸಲಾಗಿತ್ತು. ಈ ವಾರ ಸಂಸತ್ ಭವನದೊಳಗೆ ನುಸುಳಿದವರಿಗೆ ಪಾಸ್ ಗಳನ್ನು ನೀಡಿದ್ದ ಮೈಸೂರಿನ ಬಿಜೆಪಿ ಸಂಸದ ಸ್ವಚ್ಛಂದವಾಗಿ ತಿರುಗಾಡುತ್ತಿದ್ದಾರೆ. ಈ ಬಗ್ಗೆ ಗೃಹ ಸಚಿವರು ಹಾಗೂ ಪ್ರಧಾನಿ ಸಂಸತ್ ನಲ್ಲಿ ಮಾತನಾಡಬೇಕೆಂದು ಭಾರತ ಜನತೆಯ ಪರವಾಗಿ ಧ್ವನಿಯೆತ್ತಿದ ನಮ್ಮನ್ನು ಅಮಾನತುಗೊಳಿಸಲಾಗಿದೆ’’ ಎಂದು ಲೋಕಸಭೆಯಿಂದ ಅಮಾನತುಗೊಳಿಸಲ್ಪಟ್ಟ ಸಂಸದೆ ಹಿಬಿ ಎಡೆನ್ ತಿಳಿಸಿದ್ದಾರೆ.
ಲೋಕಸಭೆಯ ಕಲಾಪಗಳನ್ನು ಅಡ್ಡಿಪಡಿಸಿದ್ದಕ್ಕಾಗಿ ಕಾಂಗ್ರೆಸ್ ಸಂಸದರಾದ ಟಿ.ಎನ್.ಪ್ರತಾಪನ್, ಹಿಬಿ ಎಡೆನ್, ಜ್ಯೋತಿಮಣಿ, ರಮ್ಯಾ ಹರಿದಾಸ್, ಡೀನ್ ಕುರಿಯಾಕೋಸ್, ವಿ.ಕೆ.ಶ್ರೀಕಂಠನ್, ಬೆನ್ನಿ ಬೆಹಾನನ್, ಮೊಹಮ್ಮದ್ ಜವಾಯಿದ್ ಹಾಗೂ ಮಾಣಿಕ್ಯಂ ಟಾಗೋರ್, ಸಿಪಿಎಂ ಸಂಸದ ಪಿ.ಆರ್.ನಟರಾಜನ್ ಹಾಗೂ ಎಸ್.ವೆಂಕಟೇಶನ್, ಡಿಎಂಕೆಯ ಕನಿಮೋಳಿ ಹಾಗೂ ಸಿಪಿಐನ ಕೆ. ಸುಬ್ಬಯ್ಯನ್ ಅವರನ್ನು ಗುರುವಾರ ಅಮಾನತುಗೊಳಿಸಲಾಗಿತ್ತು.
ಸದನದಲ್ಲಿ ಉಪಸ್ಥಿತರಿರದ ಡಿಎಂಕೆ ಸಂಸದ ಎಸ್.ಆರ್.ಪಾರ್ಥಿಬನ್ ಅವರನ್ನು ಅಮಾನತುಗೊಂಡ ಸಂಸದರ ಪಟ್ಟಿಯಲ್ಲಿ ಹೆಸರಿಸಲಾಗಿತ್ತು. ಆದರೆ ಪ್ರಮಾದವಶಾತ್ ಪಾರ್ಥಿಬನ್ ಹೆಸರು ಸೇರ್ಪಡೆಗೊಂಡಿರುವುದು ಗಮನಕ್ಕೆ ಬಂದ ಬಳಿಕ ಸ್ಪೀಕರ್ , ಅವರ ಅಮಾನತು ಆದೇಶವನ್ನು ಹಿಂಪಡೆದಿದ್ದರು.
ರಾಜ್ಯಸಭೆಯಲ್ಲಿ ಅಶಿಸ್ತಿನ ವರ್ತನೆಗಾಗಿ ಟಿಎಂಸಿಯ ಡೆರೆಕ್ ಓಬ್ರಿಯಾನ್ ಅವರನ್ನು ಅಮಾನತುಗೊಳಿಸಲಾಗಿತ್ತು. ಆನಂತರ ಅವರ ವಿರುದ್ಧ ಹಕ್ಕುಚ್ಯುತಿ ನಿರ್ಣಯವನ್ನು ಮಂಡಿಸಲಾಗಿತ್ತು.







