ಬ್ರಿಟಿಷ್ ರಾಯಭಾರಿಯ ಪಿಒಕೆ ಭೇಟಿಗೆ ಭಾರತದ ಪ್ರತಿಭಟನೆ
ಜೇನ್ ಮ್ಯಾರಿಯಟ್ | Photo: Twitter/@JaneMarriottUK
ಹೊಸದಿಲ್ಲಿ : ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ಕ್ಕೆ ಇಸ್ಲಾಮಾಬಾದ್ ನಲ್ಲಿರುವ ಬ್ರಿಟಿಷ್ ರಾಯಭಾರಿಯ ಭೇಟಿಯ ವಿರುದ್ಧ ಬಲವಾದ ಪ್ರತಿಭಟನೆಯನ್ನು ವ್ಯಕ್ತಪಡಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯವು,ಭಾರತದ ಪ್ರಾದೇಶಿಕ ಸಮಗ್ರತೆಯ ಉಲ್ಲಂಘನೆಯು ಸ್ವೀಕಾರಾರ್ಹವಲ್ಲ ಎಂದು ಹೇಳಿದೆ. ಜಮ್ಮು-ಕಾಶ್ಮೀರವು ಯಾವಾಗಲೂ ಭಾರತದ ಅವಿಭಾಜ್ಯ ಭಾಗವಾಗಿದೆ ಎಂದು ಅದು ಪುನರುಚ್ಚರಿಸಿದೆ.
ಪಿಒಕೆಗೆ ಬ್ರಿಟಿಷ್ ರಾಯಭಾರಿ ಜೇನ್ ಮ್ಯಾರಿಯಟ್ ಅವರ ಭೇಟಿಗೆ ಶನಿವಾರ ಪ್ರತಿಕ್ರಿಯಿಸಿರುವ ಸಚಿವಾಲಯವು, ಜ.10ರಂದು ಪಿಒಕೆಗೆ ಬ್ರಿಟನ್ ವಿದೇಶಾಂಗ ಕಚೇರಿಯ ಅಧಿಕಾರಿಯೊಂದಿಗೆ ಬ್ರಿಟಿಷ್ ರಾಯಭಾರಿಯ ಅತ್ಯಂತ ಆಕ್ಷೇಪಾರ್ಹ ಭೇಟಿಯನ್ನು ಭಾರತವು ಗಂಭೀರವಾಗಿ ಪರಿಗಣಿಸಿದೆ. ಭಾರತದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯ ಇಂತಹ ಉಲ್ಲಂಘನೆಯು ಅಸ್ವೀಕಾರಾರ್ಹವಾಗಿದೆ ಎಂದು ಹೇಳಿದೆ.
ಈ ಉಲ್ಲಂಘನೆಯ ಕುರಿತು ವಿದೇಶಾಂಗ ಕಾರ್ಯದರ್ಶಿಗಳು ಭಾರತದಲ್ಲಿಯ ಬ್ರಿಟಿಷ್ ರಾಯಭಾರಿಗೆ ಬಲವಾದ ಪ್ರತಿಭಟನೆಯನ್ನು ಸಲ್ಲಿಸಿದ್ದಾರೆ. ಜಮ್ಮು-ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಯಾವಾಗಲೂ ಮತ್ತು ಮುಂದೆಯೂ ಭಾರತದ ಅವಿಭಾಜ್ಯ ಅಂಗಗಳಾಗಿವೆ ಎಂದು ಸಚಿವಾಲಯವು ತಿಳಿಸಿದೆ.
ಪಿಒಕೆಯಲ್ಲಿಯ ಮೀರ್ಪುರಕ್ಕೆ ತನ್ನ ಭೇಟಿಯ ಕೆಲವು ಚಿತ್ರಗಳನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದ ಮ್ಯಾರಿಯಟ್,‘ಬ್ರಿಟನ್ ಮತ್ತು ಪಾಕಿಸ್ತಾನದ ಜನರ ನಡುವಿನ ಸಂಬಂಧಗಳ ಹೃದಯವಾಗಿರುವ ಮೀರ್ಪುರದಿಂದ ಸಲಾಮ್ ಗಳು. ಶೇ.70ರಷ್ಟು ಬ್ರಿಟಿಷ್ ಪಾಕಿಸ್ತಾನಿಗಳ ಬೇರುಗಳು ಮೀರ್ಪುರದಲ್ಲಿವೆ. ಇದು ಬ್ರಿಟಿಷ್ ಪಾಕಿಸ್ತಾನಿ ಸಮುದಾಯದ ಹಿತಾಸಕ್ತಿಗಾಗಿ ನಾವು ಒಂದಾಗಿ ಶ್ರಮಿಸುವುದನ್ನು ನಿರ್ಣಾಯಕವಾಗಿಸಿದೆ. ಮೀರ್ಪುರದ ಆತಿಥ್ಯಕ್ಕಾಗಿ ಧನ್ಯವಾದಗಳು’ ಎಂದು ಪೋಸ್ಟ್ ನಲ್ಲಿ ಬರೆದಿದ್ದರು.
ಕಳೆದ ವರ್ಷದ ಅಕ್ಟೋಬರ್ನಲ್ಲಿ ಪಾಕಿಸ್ತಾನದಲ್ಲಿ ಅಮೆರಿಕದ ರಾಯಭಾರಿಯಾಗಿರುವ ಡೊನಾಲ್ಡ್ ಬ್ಲೋಮ್ ಅವರು ಪಿಒಕೆಯಲ್ಲಿನ ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ ನೀಡಿದ್ದ ಭೇಟಿಯ ಬಗ್ಗೆ ಭಾರತವು ಅಮೆರಿಕಕ್ಕೆ ತನ್ನ ಕಳವಳಗಳನ್ನು ವ್ಯಕ್ತಪಡಿಸಿತ್ತು. ದೇಶದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ವಿಶ್ವ ಸಮುದಾಯಕ್ಕೆ ಕರೆ ನೀಡಿತ್ತು.
ಬ್ಲೋಮ್ 2022ರಲ್ಲಿಯೂ ಪಿಒಕೆಗೆ ಭೇಟಿ ನೀಡಿದ್ದರು. ಡಿಸೆಂಬರ್ ನಲ್ಲಿ ಸಂಸತ್ತಿನಲ್ಲಿ ಮಾತನಾಡಿದ್ದ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಪಿಒಕೆಗಾಗಿ 24 ಸ್ಥಾನಗಳನ್ನು ಮೀಸಲಿರಿಸಲಾಗಿದೆ ಎನ್ನುವ ಮೂಲಕ ‘ಪಿಒಕೆ ನಮ್ಮದು ’ಎಂದು ಒತ್ತಿ ಹೇಳಿದ್ದರು.