ಅಮೆರಿಕದ ಭಾರಿ 'ಸುಂಕಷ್ಟ': ರಫ್ತುದಾರರಿಗೆ ಪರಿಹಾರ ಪ್ಯಾಕೇಜ್ ಸಿದ್ಧಗೊಳಿಸಿದ ಕೇಂದ್ರ ಸರ್ಕಾರ

ನಿರ್ಮಲಾ ಸೀತಾರಾಮನ್ | PC : PTI
ಹೊಸದಿಲ್ಲಿ: ಅಮೆರಿಕದ ಸುಂಕ ಏರಿಕೆಯಿಂದ ಬಾಧಿತರಾಗಿರುವ ರಫ್ತುದಾರರಿಗೆ ನೆರವು ನೀಡಲು ಕೇಂದ್ರ ಸರ್ಕಾರವು ಪರಿಹಾರ ಪ್ಯಾಕೇಜ್ ಅನ್ನು ಜಾರಿಗೊಳಿಸಲಿದೆ ಎಂದು ಶುಕ್ರವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ.
CNBC TV18 ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ನಿರ್ಮಲಾ ಸೀತಾರಾಮನ್, “ಅಮೆರಿಕದ ಶೇ. 50ರಷ್ಟು ಸುಂಕದಿಂದ ಬಾಧಿತರಾಗಿರುವವರ ಕೈಹಿಡಿಯಲು ಸರಕಾರ ಒಂದಿಷ್ಟು ಕ್ರಮಗಳನ್ನು ಜಾರಿಗೆ ತರಲಿದೆ” ಎಂದು ಹೇಳಿದ್ದಾರೆ. ಆದರೆ, ಈ ಕುರಿತು ಹೆಚ್ಚು ವಿವರಗಳನ್ನು ಅವರು ನೀಡಿಲ್ಲ.
90ಕ್ಕಿಂತ ಹೆಚ್ಚು ದಿನಗಳ ಕಾಲ ಸಾಲ ಮರುಪಾವತಿಯನ್ನು ಬಾಕಿ ಉಳಿಸಿಕೊಂಡಿರುವ ಸಣ್ಣ ಉದ್ಯಮಗಳು ಹಾಗೂ ರಫ್ತುದಾರರ ಸಾಲಗಳಿಗೆ ಖಾತರಿ ನೀಡುವ ಯೋಜನೆಯನ್ನು ಸರಕಾರ ಹೊಂದಿದೆ ಎಂದು ಸರಕಾರಿ ಮೂಲಗಳನ್ನು ಉಲ್ಲೇಖಿಸಿ ಈ ಮುನ್ನ Reuters ಸುದ್ದಿ ಸಂಸ್ಥೆ ವರದಿ ಮಾಡಿತ್ತು.
ರಶ್ಯದಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ಭಾರತವನ್ನು ಶಿಕ್ಷಿಸುವ ಕ್ರಮವಾಗಿ ಹೆಚ್ಚುವರಿ ಶೇ. 25ರಷ್ಟು ಸುಂಕ ವಿಧಿಸುವ ಮೂಲಕ, ಭಾರತದ ಉತ್ಪನ್ನಗಳಿಗೆ ವಿಧಿಸುವ ಒಟ್ಟಾರೆ ಸುಂಕವನ್ನು ಅಮೆರಿಕ ಶೇ. 50ಕ್ಕೆ ಏರಿಕೆ ಮಾಡಿತ್ತು. ಅಮೆರಿಕದ ಈ ನೀತಿಯಿಂದ ಅಮೆರಿಕಕ್ಕೆ ರಫ್ತು ಮಾಡಲಾಗುತ್ತಿದ್ದ ಜವಳಿ, ಆಭರಣ, ಪಾದರಕ್ಷೆ ಹಾಗೂ ರಾಸಾಯನಿಕಗಳು ಸೇರಿದಂತೆ ವೈವಿಧ್ಯಮಯ ಉತ್ಪನ್ನಗಳು ಬಾಧಿತವಾಗಿದ್ದವು.
ಕಾರ್ಮಿಕ ಭತ್ಯೆ ಆಧಾರಿತ ಉದ್ಯಮ ವಲಯಗಳಾದ ಜವಳಿ, ಆಭರಣ, ಸಾಗರೋತ್ಪನ್ನಗಳು, ನಿರ್ದಿಷ್ಟವಾಗಿ ಸೀಗಡಿಯಂತಹ ಕೇವಲ ಶೇ. 3-5ರಷ್ಟು ಲಾಭಾಂಶ ಹೊಂದಿರುವ ವಲಯಗಳು ಅಮೆರಿಕದ ಈ ಸುಂಕದಿಂದ ತೀವ್ರವಾಗಿ ಬಾಧಿತವಾಗಿದ್ದು, ತಮಿಳುನಾಡಿನ ಔದ್ಯಮಿಕ ತಾಣಗಳು ಹಾಗೂ ಪ್ರಧಾನಿ ನರೇಂದ್ರ ಮೋದಿಯ ತವರು ರಾಜ್ಯವಾದ ಗುಜರಾತ್ ನಲ್ಲಿ ಉದ್ಯೋಗ ನಷ್ಟಕ್ಕೀಡಾಗಿವೆ ಎಂದು ರಫ್ತುದಾರರು ಕಳವಳ ವ್ಯಕ್ತಪಡಿಸಿದ್ದಾರೆ.







