ಭಾರತದಲ್ಲಿ ಆತ್ಮಹತ್ಯೆ ಪ್ರಕರಣಗಳು ವಿಶ್ವದಲ್ಲೇ ಅಧಿಕ: ವರದಿ

Image Source : PTI
ಹೊಸದಿಲ್ಲಿ: ಇತ್ತೀಚಿಗೆ ಮುಂಬೈನಲ್ಲಿ ಚಲಿಸುತ್ತಿದ್ದ ರೈಲಿನ ಎದುರು ಹಳಿಗಳ ಮೇಲೆ ಮಲಗಿ ತಂದೆ-ಮಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಘಾತವನ್ನುಂಟು ಮಾಡಿದೆ,ಇದೇ ವೇಳೆ ಭಾರತದಲ್ಲಿ ಆತ್ಮಹತ್ಯೆ ಎನ್ನುವುದು ಯುವಜನರು ಮತ್ತು ವಯಸ್ಸಾದವರು ಎದುರಿಸುತ್ತಿರುವ ಅತ್ಯಂತ ದೊಡ್ಡ ಸಾರ್ವಜನಿಕ ಬಿಕ್ಕಟ್ಟು ಆಗಿದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.
ವಿಶ್ವದಲ್ಲಿ ಅತ್ಯಂತ ಹೆಚ್ಚಿನ ಆತ್ಮಹತ್ಯೆಗಳು ನಡೆಯುವ ದೇಶ ಎಂಬ ಕುಖ್ಯಾತಿಗೆ ಭಾರತವು ಪಾತ್ರವಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕ (ಎನ್ಸಿಆರ್ಬಿ)ವು ಎಪ್ರಿಲ್ನಲ್ಲಿ ಬಿಡುಗಡೆಗೊಳಿಸಿದ ವರದಿಯಂತೆ 2022ರಲ್ಲಿ ಭಾರತದಲ್ಲಿ 1.71 ಲಕ್ಷ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆ ದರವು ಪ್ರತಿ ಒಂದು ಲಕ್ಷಕ್ಕೆ 12.4ಕ್ಕೆ ಏರಿದ್ದು,ಭಾರತದಲ್ಲಿ ದಾಖಲಾಗಿರುವ ಅತ್ಯಧಿಕ ದರವಾಗಿದೆ.
► ಆತ್ಮಹತ್ಯೆಗಳಿಗೆ ಕಾರಣವೇನು?
ಖಿನ್ನತೆ ಆತ್ಮಹತ್ಯೆಗೆ ಪ್ರಮುಖ ಕಾರಣವಾಗಿದೆ,ಈ ಮಾನಸಿಕ ಅಸ್ವಸ್ಥತೆ ಕೆಲವರಲ್ಲಿ ಆನುವಂಶಿಕವಾಗಿರಬಹುದು ಮತ್ತು ಇತರ ಒತ್ತಡಗಳಿಂದ ಉಂಟಾಗಿರಬಹುದು ಎಂದು ಆರೋಗ್ಯ ತಜ್ಞರು ಬೆಟ್ಟು ಮಾಡಿದ್ದಾರೆ.
ಖಿನ್ನತೆ ಆತ್ಮಹತ್ಯೆಗೆ ಅತ್ಯಂತ ಸಾಮಾನ್ಯ ಕಾರಣವಾಗಿದೆ. ಸಾಮಾನ್ಯರ ಭಾಷೆಯಲ್ಲಿ ನಾವಿದನ್ನು ಒತ್ತಡ ಎಂದು ಕರೆಯುತ್ತೇವೆ. ಹಠಾತ್ ಪ್ರಚೋದನೆ ಮತ್ತು ಇತರ ಅಂಶಗಳೂ ಆತ್ಮಹತ್ಯೆಗೆ ಕಾರಣವಾಗಬಹುದು,ಆದರೆ ಹೆಚ್ಚಿನ ಆತ್ಮಹತ್ಯೆಗಳು ಖಿನ್ನತೆಯ ಕಾರಣದಿಂದಲೇ ಸಂಭವಿಸುತ್ತವೆ ಎಂದು ದಿಲ್ಲಿಯ ಸರ್ ಗಂಗಾರಾಮ್ ಆಸ್ಪತ್ರೆಯ ಇನ್ಸ್ಟಿಟ್ಯೂಟ್ ಆಫ್ ಸೈಕಿಯಾಟ್ರಿ ಆ್ಯಂಡ್ ಬಿಹೇವಿರಲ್ ಸೈನ್ಸ್ನ ಉಪಾಧ್ಯಕ್ಷ ರಾಜೀವ ಮೆಹ್ತಾ ತಿಳಿಸಿದರು.
ಜೀವನದಲ್ಲಿ ಒತ್ತಡಗಳಿಗೆ ಸಾಮಾನ್ಯಕಾರಣಗಳು ಕೆಲಸ,ಹಣಕಾಸು,ಸಂಬಂಧಗಳು ಮತ್ತು ಆರೋಗ್ಯಕ್ಕೆ ಸಂಬಂಧಿಸಿವೆ. ಇವು ಬದುಕಿನಲ್ಲಿ ಏರುಪೇರುಗಳನ್ನುಂಟು ಮಾಡುವ ನಾಲ್ಕು ಸಾಮಾನ್ಯ ಕ್ಷೇತ್ರಗಳಾಗಿವೆ. ಒತ್ತಡವು ತೀವ್ರಗೊಂಡಾಗ ಅದು ಕ್ರಮೇಣ ಆತಂಕ ಮತ್ತು ಖಿನ್ನತೆಯಾಗಿ ಬದಲಾಗುತ್ತದೆ ಮತ್ತು ಆತ್ಮಹತ್ಯೆಗೆ ಕಾರಣವಾಗುತ್ತದೆ ಎಂದರು.
ಆತ್ಮಹತ್ಯೆ ಮಾಡಿಕೊಳ್ಳುವ ಸುಮಾರು ಶೇ.50ರಿಂದ ಶೇ.90ರಷ್ಟು ವ್ಯಕ್ತಿಗಳು ಖಿನ್ನತೆ,ಆತಂಕ ಮತ್ತು ಬೈಪೋಲಾರ್ ಡಿಸಾರ್ಡರ್ನಂತಹ ಮಾನಸಿಕ ಅಸ್ವಸ್ಥತೆಗಳಿಂದ ಬಳಲುತ್ತಿರುತ್ತಾರೆ ಎಂದು ಅಧ್ಯಯನಗಳೂ ಸೂಚಿಸಿವೆ.







